



ಕೊಪ್ಪಳ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶಕ್ಕೆ ಶಂಕರಾಚಾರ್ಯರ ಕೊಡುಗೆ ಅವರ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕೊಪ್ಪಳ ವಿಧಾನ ಸಭೆಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 21 ರಂದು ಕೊಪ್ಪಳ ಕೋಟೆ ಹತ್ತಿರದ ಶ್ರೀ ಶಂಕರ ಸಾಂಸ್ಕೃತಿಕ ಭವನ ಹಮ್ಮಿಕೊಂಡಿದ ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಅದ್ವೈತ ಸಿದ್ಧಾಂತದ ಪ್ರತಿಪಾದಕರು ಹಾಗೂ ಜಗದ್ಗುರುಗಳಾದ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಆದಿ ಶಂಕರಾಚಾರ್ಯರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ. ಅವರ ಅದ್ವೈತ ತತ್ವವು ಇಂದಿಗೂ ಮಾನವ ಜೀವನಕ್ಕೆ ದಾರಿ ತೋರಿಸುತ್ತಿದೆ. ಯುವಜನತೆಗೆ ಶಂಕರಾಚಾರ್ಯರ ಆದರ್ಶಗಳನ್ನು ತಿಳಿಸುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಮೂಲಕ ಅವರ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಮಾತನಾಡಿ, ಭಾರತೀಯ ದಾರ್ಶನಿಕ ಪರಂಪರೆಯ ಮಹಾನ್ ತತ್ವಜ್ಞರಾದ ಆದಿ ಶಂಕರಾಚಾರ್ಯ ಅದ್ವೈತ ವೇದಾಂತವು ಜಗತ್ತಿನ ಏಕತ್ವವನ್ನು ಸಾರುತ್ತದೆ. ಇದು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸಲು ನೆರವಾಗುತ್ತದೆ. “ಬ್ರಹ್ಮವೇ ಸತ್ಯ, ಜಗತ್ತು ಮಿಥ್ಯಾ” ಎಂಬ ಶಂಕರಾಚಾರ್ಯರ ತತ್ವ ಮಾನವನ ಆತ್ಮಜ್ಞಾನಕ್ಕೆ ದಾರಿ ತೋರಿಸುತ್ತದೆ. ಶಂಕರಾಚಾರ್ಯರು ಅದ್ವೈತ ವೇದಾಂತವನ್ನು ಕಾಲನೆಡಿಗೆ ಮೂಲಕ ಜಗತ್ತಿಗೆ ಸಾರಿದ್ದಾರೆ ಎಂದು ತಿಳಿಸಿದರು.
ಧಾರವಾಡದ ನಿವೃತ್ತ ಪ್ರಾಚಾರ್ಯರಾದ ಡಾ.ವಿದ್ಯಾನಾಥ ಶಾಸ್ತ್ರೀಗಳು ಶಂಕರಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವೀರಣ್ಣ ಗಡಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಶ್ರೀ ಶಂಕರ ಸೇವಾ ಸಮಿತಿಯ ಅಧ್ಯಕ್ಷರಾದ ಡಿ.ವಿ.ಜೋಶಿ, ಉಪಾಧ್ಯಕ್ಷರಾದ ಅಶೋಕ ಪದಕಿ, ರಮೇಶ್ ಪದಕಿ, ಕಾರ್ಯದರ್ಶಿಯಾದ ರವಿ ಪುರೋಹಿತ, ಸಮಾಜದ ಮುಖಂಡರಾದ ವಿಜಯಕುಮಾರ ಪದಕಿ, ವಿಶ್ವನಾಥ ಸಿದ್ಧಾಂತಿ, ನಾಗರಜ ಸಿದ್ಧಾಂತಿ, ಉದಯಕುಮಾರ ಗುಡ್ಡಿ, ಬಿಂದರಾಮ ಪದಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್