
ಗದಗ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳಾ ಮೀಸಲಾತಿ ಮಸೂದೆ ಸೋಲಿಗೆ ಕಾಂಗ್ರೆಸ್ ಕಾರಣವೆಂದು ಬಿಜೆಪಿ ಶಾಸಕ ಸಿ.ಸಿ. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಈ ವಿಷಯದಲ್ಲಿ ತೋರಿದ ನಿಲುವು ಮಹಿಳೆಯರಿಗೆ ಮಾಡಿದ ಅಪಮಾನವೆಂದರು.
ಮಹಿಳಾ ಮೀಸಲಾತಿ ಸುಮಾರು 30 ವರ್ಷಗಳಿಂದಲೂ ಮುಂದುವರಿದ ಬೇಡಿಕೆಯಾಗಿದ್ದು, ಇದನ್ನು ವಿಫಲಗೊಳಿಸಿರುವುದು ದುಃಖಕರ ಸಂಗತಿ ಎಂದು ಹೇಳಿದರು.
“ದೇಶದ ಜನಸಂಖ್ಯೆ 140 ಕೋಟಿಯನ್ನು ದಾಟಿರುವ ಹಿನ್ನೆಲೆ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಅಗತ್ಯವಿದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸೇರಿದಂತೆ ಪಕ್ಷದ ನಾಯಕರು ಮಸೂದೆ ಸೋಲಿನ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವುದು ಇತಿಹಾಸದಲ್ಲೇ ಮೊದಲ ಘಟನೆ ಎಂದು ಆರೋಪಿಸಿದರು.
“ಒಬ್ಬ ಮಹಿಳೆಯಾಗಿ ಈ ರೀತಿಯ ನಿಲುವು ತೆಗೆದುಕೊಳ್ಳುವುದು ಮಹಿಳೆಯರಿಗೆ ಅವಮಾನವಾಗಿದೆ. ಮಹಿಳೆಯರ ಶಾಪದಿಂದ ಕಾಂಗ್ರೆಸ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.
ಇದೇ ವೇಳೆ, ಮುಸ್ಲಿಂ ಮಹಿಳೆಯರ ವಿಚಾರ ಪ್ರಸ್ತಾಪಿಸಿದ ಪಾಟೀಲ್, “ಮೂರು ತಲಾಕ್ ಮೂಲಕ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯವನ್ನು ಕೇಂದ್ರದ ಮೋದಿ ಸರ್ಕಾರ ರದ್ದುಪಡಿಸಿ ನ್ಯಾಯ ಒದಗಿಸಿದೆ” ಎಂದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, “ಅಲ್ಲಿ ನ್ಯಾಯಾಂಗದ ಮೇಲೆಯೂ ಒತ್ತಡ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಮೌನವಾಗಿದೆ” ಎಂದು ಆರೋಪಿಸಿದರು.
ರಾಜಕೀಯವಾಗಿ ಜನರ ವಿಶ್ವಾಸವೇ ಮುಖ್ಯವಾಗಿದ್ದು, ಜನರು ಯಾರನ್ನು ಇಷ್ಟಪಡುತ್ತಾರೋ ಅವರಿಗೆ ಮತ ನೀಡುತ್ತಾರೆ ಎಂದ ಅವರು, ರಾಹುಲ್ ಗಾಂಧಿ ಕುರಿತು ಟೀಕೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಎರಡು ಪ್ರಮುಖ ಮಸೂದೆಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವುದು ಹೊಸ ನಾಯಕತ್ವದ ದೋಷವೋ ಅಥವಾ ರಾಜಕೀಯ ಲೆಕ್ಕಾಚಾರವೋ ಎಂಬ ಪ್ರಶ್ನೆ ಉದ್ಭವಿಸಿದೆ. ಇದರ ಪರಿಣಾಮವಾಗಿ ಮಹಿಳೆಯರ ಅಸಮಾಧಾನ ಕಾಂಗ್ರೆಸ್ ವಿರುದ್ಧ ವ್ಯಕ್ತವಾಗುವ ಸಾಧ್ಯತೆಯಿದೆ ಎಂದು ಸಿ.ಸಿ. ಪಾಟೀಲ್ ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / lalita MP