
ಚಿತ್ರದುರ್ಗ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವತಿಯಿಂದ ಏ.23 ಮತ್ತು 24ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಾದ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆಇಎ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದ್ದು, ಯಾವುದೇ ಉಲ್ಲಂಘನೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಪುರುಷ ಅಭ್ಯರ್ಥಿಗಳಿಗಾಗಿ ನಿಯಮಗಳು: ಅರ್ಧ ತೋಳಿನ ಸರಳ ಶರ್ಟ್ ಅಥವಾ ಟಿ-ಶರ್ಟ್ ಧರಿಸಬೇಕು. ಜೀನ್ಸ್ ಪ್ಯಾಂಟ್ ಹಾಗೂ ಕುರ್ತಾ ಪೈಜಾಮ ಧರಿಸುವುದು ನಿಷೇಧವಾಗಿದೆ. ಶೂಗಳನ್ನು ಧರಿಸುವಂತಿಲ್ಲ; ಚಪ್ಪಲಿ ಅಥವಾ ಸ್ಯಾಂಡಲ್ ಮಾತ್ರ ಅನುಮತಿಸಲಾಗಿದೆ. ಲೋಹದ ಆಭರಣಗಳು ಹಾಗೂ ಹೆಚ್ಚು ಜೇಬುಗಳು/ಬಟನ್ಗಳಿರುವ ಬಟ್ಟೆಗಳನ್ನು ತಡೆಯಲಾಗಿದೆ.
ಮಹಿಳಾ ಅಭ್ಯರ್ಥಿಗಳಿಗಾಗಿ ನಿಯಮಗಳು: ಅರ್ಧ ತೋಳಿನ ಸರಳ ಬಟ್ಟೆಗಳನ್ನು ಧರಿಸಬೇಕು. ಜೀನ್ಸ್ ಮತ್ತು ಅತಿಯಾಗಿ ಅಲಂಕರಿತ ಬಟ್ಟೆಗಳು ನಿಷೇಧಿಸಲಾಗಿದೆ. ಹೈ ಹೀಲ್ ಶೂಗಳಿಗೆ ಅವಕಾಶವಿಲ್ಲ; ತೆಳುವಾದ ಚಪ್ಪಲಿಗಳು ಮಾತ್ರ ಅನುಮತಿಸಲಾಗಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇತರ ಲೋಹದ ಆಭರಣಗಳಿಗೆ ಅವಕಾಶವಿಲ್ಲ.
ನಿಷೇಧಿತ ವಸ್ತುಗಳು: ಮೊಬೈಲ್, ಇಯರ್ಫೋನ್, ಬ್ಲೂಟೂತ್ ಸಾಧನಗಳು, ಕೈಗಡಿಯಾರ, ಪೆನ್ ಡ್ರೈವ್, ಪೆನ್ಸಿಲ್ ಬಾಕ್ಸ್, ಲಾಗ್ ಟೇಬಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಅಥವಾ ಸಹಾಯಕ ವಸ್ತುಗಳನ್ನು ತರುವಂತಿಲ್ಲ. ಮಾಸ್ಕ್ ಧರಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಕುಡಿಯುವ ನೀರು ಪರೀಕ್ಷಾ ಕೇಂದ್ರದಲ್ಲೇ ಲಭ್ಯವಾಗಲಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರ ಹಾಗೂ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಕೆ. ತಿಮ್ಮಯ್ಯ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa