ಯಾವುದೇ ಸವಾಲಿಗೆ ಭಾರತ ಸಿದ್ಧ : ರಾಜನಾಥ್ ಸಿಂಗ್
ತಿರುವನಂತಪುರಂ, 02 ಏಪ್ರಿಲ್(ಹಿ.ಸ.): ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಭಾರತವು ಎಚ್ಚರಿಕೆಯಿಂದ ಸ್ಥಿತಿಗತಿಗಳನ್ನು ಗಮನಿಸುತ್ತಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರ
Rajnath singh


ತಿರುವನಂತಪುರಂ, 02 ಏಪ್ರಿಲ್(ಹಿ.ಸ.):

ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಭಾರತವು ಎಚ್ಚರಿಕೆಯಿಂದ ಸ್ಥಿತಿಗತಿಗಳನ್ನು ಗಮನಿಸುತ್ತಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರದಲ್ಲಿ ನಡೆದ ‘ಸೈನಿಕ್ ಸಮ್ಮಾನ್ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾವು ಒಂದು ಮಹತ್ವದ ಬದಲಾವಣೆಯ ಅವಧಿಯನ್ನು ಎದುರಿಸುತ್ತಿದ್ದೇವೆ. ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಮಟ್ಟದ ಸಂಘರ್ಷ ನಡೆಯುತ್ತಿದೆ. ಅಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಭಾರತೀಯರು, ವಿಶೇಷವಾಗಿ ಕೇರಳದ ಜನರು, ಯಾವುದೇ ಆತಂಕಪಡುವ ಅಗತ್ಯವಿಲ್ಲ,” ಎಂದರು.

ಸುಳ್ಳು ಸುದ್ದಿಗಳು ಮತ್ತು ಭೀತಿಯನ್ನು ಹರಡುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆ ನೀಡಿದ ಸಚಿವರು, “ಕೆಲವರು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಭಯ ಹುಟ್ಟಿಸುತ್ತಿದ್ದಾರೆ. ಆದರೆ ದೇಶವು ಯಾವುದೇ ಇಂಧನ ಬಿಕ್ಕಟ್ಟನ್ನೂ ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರ ಏಕತೆಯ ಅಗತ್ಯವನ್ನು ಒತ್ತಿ ಹೇಳಿದ ರಾಜನಾಥ ಸಿಂಗ್, ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ ಪಕ್ಷಗಳು ಭೇದಭಾವಗಳನ್ನು ಮರೆತು ದೇಶದ ಹಿತಕ್ಕಾಗಿ ಒಂದಾಗಬೇಕು ಎಂದು ಕರೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಹಿತಾಸಕ್ತಿಗಳನ್ನು ರಕ್ಷಿಸಲು ನಿರಂತರವಾಗಿ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದೂ ಹೇಳಿದರು.

ಕೇರಳ ರಾಜ್ಯದ ಬಗ್ಗೆ ಪ್ರಶಂಸಿಸಿದ ಅವರು, “ಇದು ದೇಶದ ಅತ್ಯಂತ ಸುರಕ್ಷಿತ ರಾಜ್ಯಗಳಲ್ಲಿ ಒಂದು. ಇಲ್ಲಿ ಜನರಲ್ಲಿ ರಾಷ್ಟ್ರೀಯ ರಕ್ಷಣಾ ಚೇತನ ಬಲವಾಗಿದೆ. ಹೆಚ್ಚಿನ ಸಂಖ್ಯೆಯ ಕೇರಳಿಗರು ನೌಕಾಪಡೆ, ಭೂಸೇನೆ ಮತ್ತು ವಾಯುಪಡೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ,” ಎಂದರು.

ಹಡಗು ನಿರ್ಮಾಣ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಉಲ್ಲೇಖಿಸಿದ ಸಚಿವರು, “ಇಂದು ಭಾರತವು ಈ ಕ್ಷೇತ್ರದಲ್ಲಿ ಯಾವುದೇ ಪ್ರಮುಖ ಜಾಗತಿಕ ಶಕ್ತಿಗಿಂತ ಕಡಿಮೆಯಿಲ್ಲ. ಕೇರಳದ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಿಸಲಾದ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಇದರ ಉದಾಹರಣೆ,” ಎಂದು ಹೇಳಿದರು. 2047ರೊಳಗೆ ಭಾರತೀಯ ನೌಕಾಪಡೆಯನ್ನು ವಿಶ್ವದ ಅತಿದೊಡ್ಡ ಹಾಗೂ ಶಕ್ತಿಶಾಲಿ ನೌಕಾಪಡೆಯನ್ನಾಗಿ ರೂಪಿಸುವ ಗುರಿಯನ್ನೂ ಅವರು ಪುನರುಚ್ಚರಿಸಿದರು.

ಮಾಜಿ ಸೈನಿಕರ ಕಲ್ಯಾಣದ ಕುರಿತು ಮಾತನಾಡಿದ ಅವರು, “ನಮ್ಮ ಸರ್ಕಾರವು ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್ಒಪಿ) ಯೋಜನೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತಂದಿದೆ. ಇದು ಮಾಜಿ ಸೈನಿಕರ ಆರ್ಥಿಕ ಸ್ಥಿರತೆಯನ್ನು ಬಲಪಡಿಸಿದೆ,” ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ದೀರ್ಘಕಾಲ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದೆ ಎಂಬ ಟೀಕೆಯನ್ನೂ ಅವರು ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande