
ಕೋಲ್ಕತ್ತಾ, 02 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಭವಾನಿಪುರ ಕ್ಷೇತ್ರ ರಾಜಕೀಯ ಚಟುವಟಿಕೆಗಳಿಂದ ಕೂಡಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಕೋಲ್ಕತ್ತಾದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಹಜ್ರಾ ಕ್ರಾಸಿಂಗ್ನಲ್ಲಿ ಪ್ರಾರಂಭವಾದ ಈ ರೋಡ್ ಶೋನಲ್ಲಿ ಅಮಿತ್ ಶಾ ಮತ್ತು ಸುವೇಂದು ಅಧಿಕಾರಿ ಒಟ್ಟಿಗೆ ಭಾಗವಹಿಸಿ, ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಕೋರಿದರು. ನಾಮಪತ್ರ ಸಲ್ಲಿಸಲು ಸಿದ್ಧರಾಗಿರುವ ಇತರ ಬಿಜೆಪಿ ಅಭ್ಯರ್ಥಿಗಳೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯವಾಗಿದೆ. ಭವಾನಿಪುರದಲ್ಲಿಯೂ ಈ ಬದಲಾವಣೆ ಅಗತ್ಯ,” ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಬಹುಮತದಿಂದ ಗೆಲ್ಲಬೇಕು ಎಂದು ಅವರು ಜನತೆಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಭವಾನಿಪುರದಿಂದಲೇ ಸ್ಪರ್ಧಿಸುವಂತೆ ಸುವೇಂದು ಅಧಿಕಾರಿ ಅವರನ್ನು ಪ್ರೇರೇಪಿಸಿದ್ದಾಗಿ ಅವರು ತಿಳಿಸಿದರು. “ಕಳೆದ ಬಾರಿ ಮಮತಾ ಬ್ಯಾನರ್ಜಿ ಸರ್ಕಾರ ರಚಿಸಿದರೂ, ನಂದಿಗ್ರಾಮದಲ್ಲಿ ಸೋಲು ಕಂಡರು,” ಎಂದು ಅವರು ಉಲ್ಲೇಖಿಸಿದರು.
ಬಿಜೆಪಿ ರಾಜ್ಯದಲ್ಲಿ 170ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ ಅಮಿತ್ ಶಾ, “ಭವಾನಿಪುರದಲ್ಲಿ ಗೆಲುವು ಸಾಧಿಸುವುದು ರಾಜ್ಯ ರಾಜಕೀಯಕ್ಕೆ ದೊಡ್ಡ ಸಂದೇಶವಾಗಲಿದೆ,” ಎಂದರು. “ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದರೆ, ಬದಲಾವಣೆಯ ದಾರಿ ಸುಗಮವಾಗುತ್ತದೆ,” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa