ಹೋರಾಟಗಳ ಸಂಗಾತಿ ಆವಣಿ ಕಾಶಿ ನಿಧನ
ಹೋರಾಟಗಳ ಸಂಗಾತಿ ಆವಣಿ ಕಾಶಿ ನಿಧನ
ಆವಣಿ ಕಾಶಿ


ಕೋಲಾರ, ೧೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ಎಂಬತ್ತರ ದಶಕದಲ್ಲಿ ಕೋಲಾರ ಜಿಲ್ಲೆ ಎಡ ದಲಿತ, ಪ್ರಗತಿಪರ ಎಲ್ಲಾ ಜನ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರಮುಖ ಹೋರಾಟಗಾರರಾಗಿದ್ದ ಆವಣಿ ಕಾಶಿ ತೀವ್ರ ಅನಾರೋಗ್ಯದಿಂದ ಮೃತಪಟ್ಟರು.

ಪ್ರಾರಂಭದಲ್ಲಿ ತೆಲಂಗಾಣ, ಆಂಧ್ರದ ಎಡ ತೀವ್ರವಾದಿ ಗುಂಪುಗಳ ಸಂಪರ್ಕದಿ0ದ ಪ್ರಭಾವಿತರಾಗಿ ಬಿಎಸ್ಎನ್ಎಲ್ ಉದ್ಯೋಗ ತೆಜಿಸಿ ಕೊನೆಯ ಉಸಿರು ಇರುವವರೆಗೂ ಹೋರಾಟದ ಜೀವನವನ್ನು ಸಕ್ರಿಯವಾಗಿ , ತಾತ್ವಿಕವಾಗಿ ನಡೆಸಿದವರು. ಉತ್ತಮ ಬರಹಗಾರರು, ಪತ್ರಕರ್ತರು, ಹಾಡುಗಾರರು ಆಗಿದ್ದ ಆವಣಿ ಕಾಶಿ ರವರು ಹಲವು ದೌರ್ಜನ್ಯದ ಘಟನೆ ಕುರಿತು ಹಾಡು ಕಟ್ಟಿ ತನ್ನದೇ ಕಂಠದಲ್ಲಿ ಹಾಡಿದವರು, ಆ ಮೂಲಕ ದಲಿತ ಚಳುವಳಿಯ ನೆಲೆ ಅದ ಕೋಲಾರ ಜಿಲ್ಲೆಯಲ್ಲಿ ಡಿಎಸ್ಎಸ್ ಕಲಾ ಸಾಂಸ್ಕೃತಿಕ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ತೆಲಂಗಾಣ ಹೋರಾಟದ ದಂತಕಥೆ ಕಾಮ್ರೇಡ್ ಗದ್ದರ್ ರವರೊಂದಿಗೆ ದೀರ್ಘಕಾಲದಿಂದ ನಿಕಟ ಸಂಪರ್ಕ ಹೊಂದಿದ್ದ ಕಾಶಿ ರವರು ತೆಲಂಗಾಣ ಹೋರಾಟಗಾರರ ಮಾದರಿಯಲ್ಲಿ ಸಾಂಸ್ಕೃತಿಕ ಚಳುವಳಿ ಕಟ್ಟಬೇಕೆಂದು ನೂರಾರು ತೆಲುಗು ಹಾಡುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ, ಟ್ಯೂನ್ ಮಾಡಿ ಹೋರಾಟದ ಹಾಡುಗಳನ್ನು ಹಾಡುವ ಹಲವು ಯುವ ಕಲಾವಿದರಿಗೆ ತರಬೇತಿ ನೀಡಿ ತಂಡಗಳನ್ನು ಕಟ್ಟಿ ಸಾವಿರಾರು ಕಲಾ ಪ್ರದರ್ಶನಗಳನ್ನು ನೀಡಿದ್ದರು.

ತೊಂಬತ್ತರ ದಶಕದ ನಂತರ ತಾತ್ವಿಕ ಭಿನ್ನಾಭಿಪ್ರಾಯಗಳಿಂದ ದಲಿತ ಚಳುವಳಿ ಹಲವು ವಿಭಾಗಗಳಾಯಿತು. ಆದರೂ ಕಾಶಿಯವರು ತಮ್ಮ ಇತಿಮಿತಿಯಲ್ಲಿ ಹೋರಾಟವನ್ನು ಮುಂದುವರೆಸಿದರು. ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ಸಮಯ ಸಿಕ್ಕಾಗ ಸಂಗಾತಿಗಳ ಜೊತೆ ಸೇರಿ ಹೋರಾಟಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಇದೆಲ್ಲದ ಮಧ್ಯೆ ಪತ್ರಕರ್ತರಾಗಿ ಸ್ವಂತ ಹೋರಾಟದ ಧ್ವನಿ ಪತ್ರಿಕೆಯೊಂದನ್ನು ನಡೆಸುತ್ತಾ ಅದರಲ್ಲಿ ದೇಶದ ಹಲವು ಭಾಗಗಳ ಹೋರಾಟಗಾರರ ಅನುಭವ, ಜೀವನವನ್ನು ಅಕ್ಷರ ರೂಪದಲ್ಲಿ ಬರೆದು ಆ ಪತ್ರಿಕೆಯನ್ನು ಸಾವಿರಾರು ಜನರಿಗೆ ತಲುಪಿಸಿ ಬದಲಾವಣೆಯ ಬೀಜಗಳನ್ನು ಬಿತ್ತುವ ನೈಜ ಜನ ಚಳುವಳಿಯ ಕೃಷಿಕನಾಗಿದ್ದರು.

ಸ್ಥಳಿಯವಾಗಿ ದಲಿತರು, ಶೋಷಿತರ ಭೂಮಿ, ವಸತಿ, ಮೂಲಸೌಕರ್ಯಗಳು, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ತನ್ನ ವಯಸ್ಸು, ಆರೋಗ್ಯವನ್ನು ಲೆಕ್ಕಿಸದೆ ಪ್ರತಿಯೊಂದು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತೀಕ್ಷ ಆಲೋಚನೆಗಳು, ಹಾಡುಗಳಿಂದ ಜನಮನ ಸೆಳೆಯುತ್ತಿದ್ದವರು.

ಕಾಶಿಯವರ ನಿಧನಕ್ಕೆ ವಕೀಲ ಹಾಗೂ ಯುವ ಕಾಂಗ್ರೆಸ್ ಮುಖಂಡ ವಾಸುದೇವರೆಡ್ಡಿ ತೀವ್ರಸ ಸಂತಾಪ ವ್ಯಕ್ತಪಡಿಸಿದ್ದಾರೆ. ನನಗೆ ಕಳೆದ ಒಂದುವರೆ ದಶಕದಿಂದ ಕಾಶಣ್ಣನವರ ಒಡನಾಟದಲ್ಲಿ ಹಲವು ಚರ್ಚೆ, ಸಂವಾದಗಳು, ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಪ್ರಬುದ್ಧ ಆಲೋಚನೆಗಳು, ಮಾರ್ಕ್ಸ್ ವಾದ, ಅಂಬೇಡ್ಕರ್ ವಾದ, ಪೆರಿಯಾರ್ ವಾದ, ಹೀಗೆ ಹಲವು ಸೈದ್ಧಾಂತಿಕ ನೆಲೆಗಳ ಕುರಿತು ಆಳವಾದ ಪರಿಚಯಗಳಿಗೆ ಕಾಮ್ರೇಡ್ ಕಾಶಣ್ಣ ರವರೊಂದಿಗಿನ ವಿಚಾರ ವಿನಿಮಯ ಚರ್ಚೆಗಳು ಸಹಾಯವಾಗಿರುವುದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಿತ್ಯ ಹೋರಾಟದ ಆವಣಿ ಕಾಶಿ ರವರು ಕಳೆದ ೧೫ ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಿದ್ದು ನಮಗ್ಯಾರಿಗೂ ಗೊತ್ತಿರಲಿಲ್ಲ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನು ಅಗಲಿದ್ದಾರೆ ಎಂದು ಡಿಎಸ್ ಎಸ್ ಜಿಲ್ಲಾ ಸಂಯೋಜಕರಾದ ಮೆಕಾನಿಕ್ ಸೀನಣ್ಣ ಈಗ ತಾನೇ ಕಾಲ್ ಮಾಡಿ ಹೇಳಿದ್ದು ನಿಜವಾಗಿಯೂ ತುಂಬಾ ನೋವಿನ ಸಂಗತಿಯಾಗಿದೆ. ಮನಸ್ಸು ಅವನಿ ಕಾಶಣ್ಣ ನೆನಪುಗಳನ್ನು ಮೆಲುಕು ಹಾಕುತ್ತಾ... ಕಣ್ಣುಗಳು ತೇವಗೊಂಡಿವೆ..

ಇ0ತಹ ಸಾಂಸ್ಕೃತಿಕ ಚಳುವಳಿಯ ಹೋರಾಟಗಾರರಿಗೆ ನಾವೆಲ್ಲರೂ ಸೇರಿ ಕಲಾ ಸಾಂಸ್ಕೃತಿಕ ವಿದಾಯ ಹೇಳೋಣ. ಲಾಲ್ ಸಲಾಂ...ಜೈ ಭೀಮ್ ಅವನಿ ಕಾಶಣ್ಣನಿಗೆ ಹೋರಾಟದ ನಮನಗಳನ್ನು ವಾಸುದೇವರೆಡ್ಡಿ ಸಲ್ಲಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande