
ನವದೆಹಲಿ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸಲು ಕಾಂಗ್ರೆಸ್ ಬಹಳ ಕಾಲದಿಂದ ಹೋರಾಟ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನವದೆಹಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸಿ ಅಂಗೀಕರಿಸಿತ್ತು. ಆದರೆ ನಂತರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿಯ ಜೊತೆಗೆ ಗಡಿ ನಿರ್ಣಯದ ನಿಬಂಧನೆಯನ್ನು ಸೇರಿಸುವ ಮೂಲಕ ಮತ್ತೊಂದು ತಿದ್ದುಪಡಿ ತಂದಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಸರ್ಕಾರ ಮಹಿಳಾ ಮೀಸಲಾತಿ ಮತ್ತು ಗಡಿ ನಿರ್ಣಯಕ್ಕೆ ಸಂಬಂಧಿಸಿದ ಮಸೂದೆಗಳನ್ನು ಒಟ್ಟುಗೂಡಿಸಿದ್ದು, ಗಡಿ ನಿರ್ಣಯ ಮಸೂದೆಯನ್ನು ಪರಿಚಯಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕಾದರೆ ಅದನ್ನು ಈಗಿರುವ 543 ಲೋಕಸಭಾ ಸದಸ್ಯರ ಸ್ಥಾನಗಳಿಗೆ ಸೀಮಿತಗೊಳಿಸಬೇಕು. ನಂತರ ಜನಗಣತಿ ಮತ್ತು ಗಡಿ ನಿರ್ಣಯದ ಬಳಿಕ ಮುಂದಿನ ಚುನಾವಣೆಗೆ ಅದನ್ನು ವಿಸ್ತರಿಸಬಹುದು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿತ್ತು ಎಂದು ಖರ್ಗೆ ತಿಳಿಸಿದ್ದಾರೆ.
ಆದರೆ ಸರ್ಕಾರ ಅದನ್ನು ಮಾಡಲು ಬಯಸುತ್ತಿಲ್ಲ. ವಾಸ್ತವವಾಗಿ, ಸಂವಿಧಾನದ ರಚನೆಯನ್ನು ಬದಲಾಯಿಸುವ ಮೂಲಕ ಕಾರ್ಯಾಂಗದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುವುದು ಮೋದಿ ಸರ್ಕಾರದ ಉದ್ದೇಶವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa