
ಕೊಯಮತ್ತೂರು, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಪ್ರಪಾತಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ.
ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಗ್ರಾಮದ ಸರ್ಕಾರಿ ಎಲ್ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ. ಮೃತರನ್ನು ಅಜಿತಾ (54), ರಮ್ಲಾ (52), ಸುಹ್ರಾ (43), ಆಶಾ (41), ಮಜೀತ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಂ (12) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಕೇರಳದ ಪೆರಿಂತಲ್ಮಣ ಮೂಲದ 13 ಸದಸ್ಯರ ತಂಡ ವಾಲ್ಪಾರೈ ಪ್ರವಾಸ ಮುಗಿಸಿ ವಾಪಸಾಗುತ್ತಿತ್ತು. ಸಂಜೆ ಸುಮಾರು 5:15ರ ವೇಳೆಗೆ 13ನೇ ಹೇರ್ಪಿನ್ ತಿರುವಿನ ಬಳಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮವಾಗಿ ವ್ಯಾನ್ ರಸ್ತೆಯಿಂದ ಜಾರಿ ಸುಮಾರು ನಾಲ್ಕು ಹೇರ್ಪಿನ್ ತಿರುವುಗಳಷ್ಟು ಕೆಳಗೆ, 9ನೇ ಹೇರ್ಪಿನ್ ತಿರುವಿನವರೆಗೆ ಉರುಳಿದೆ.
ಅಪಘಾತ ನಡೆದ ಪ್ರದೇಶವು ಕಡಿದಾದ ಬೆಟ್ಟ ಪ್ರದೇಶವಾಗಿದ್ದು, ಸುತ್ತಮುತ್ತ ದಟ್ಟ ಅರಣ್ಯ ಮತ್ತು ಆಳವಾದ ಕಂದಕಗಳಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸೇರಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ರಕ್ಷಿಸಿದರು.
ಘಟನಾ ಸ್ಥಳಕ್ಕೆ ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್ ಜಿ. ಗಿರಿಯಪ್ಪನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕಡಂಪರೈ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa