
ಬೆಂಗಳೂರು, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕತೆ ಕೇಂದ್ರ ಸರ್ಕಾರಕ್ಕಿಂತಲೂ ಉತ್ತಮವಾಗಿದೆ ಎಂದು ಹೇಳಿದ್ದರೂ, ಇದೀಗ ಅದೇ ಸರ್ಕಾರ ವಿದ್ಯುತ್ ದರ ಹೆಚ್ಚಳದ ಮೂಲಕ ತನ್ನ ಆರ್ಥಿಕ ಅಸಾಮರ್ಥ್ಯವನ್ನು ಬಯಲುಮಾಡಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 56 ಪೈಸೆ ಹಾಗೂ ಸಿಇಎಸ್ಸಿ ವ್ಯಾಪ್ತಿಯಲ್ಲಿ 15 ಪೈಸೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಮೂಲಕ ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಸರ್ಕಾರ ಹೆಚ್ಚುವರಿ ಹೊರೆ ಹಾಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಅಸಮರ್ಪಕ ಆಡಳಿತ ಮತ್ತು ಆರ್ಥಿಕ ಶಿಸ್ತಿನ ಕೊರತೆಯಿಂದ ಉಂಟಾದ ನಷ್ಟವನ್ನು ಜನರ ಮೇಲೆ ಹಾಕಲಾಗುತ್ತಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. ಒಂದು ಕಡೆ ಗ್ಯಾರಂಟಿ ಯೋಜನೆಗಳು ಮತ್ತು ಉಚಿತ ಸೇವೆಗಳ ಹೆಸರಿನಲ್ಲಿ ಜನರನ್ನು ಆಕರ್ಷಿಸುವ ಸರ್ಕಾರ, ಮತ್ತೊಂದು ಕಡೆ ಬೆಲೆ ಏರಿಕೆಯ ಮೂಲಕ ಜನರ ಹಣವನ್ನು ವಸೂಲಿ ಮಾಡುತ್ತಿದೆ ಎಂದು ದೂರಿದ್ದಾರೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನತೆಗೆ ವಿದ್ಯುತ್ ದರ ಹೆಚ್ಚಳ ಮತ್ತೊಂದು ಹೊರೆ ತಂದಿದೆ. ರೈತರು, ಶ್ರಮಿಕರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಇದು ನೇರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದರ ಪರಿಣಾಮವನ್ನು ಸರ್ಕಾರ ಈಗ ಜನರ ಮೇಲೆ ಹೇರುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ. ಕೂಡಲೇ ಈ ಜನವಿರೋಧಿ ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿದ್ಯುತ್ ದರ ಏರಿಕೆ ಜನರ ಹಿತಕ್ಕೆ ವಿರುದ್ಧವಾಗಿದ್ದು, ಈ ಕ್ರಮ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ತಮ್ಮ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa