
ಬೆಂಗಳೂರು, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತದ ಸ್ವಾತಂತ್ರ್ಯ ಲಕ್ಷಾಂತರ ಜನರ ತ್ಯಾಗ, ಹೋರಾಟ ಮತ್ತು ಬಲಿದಾನದ ಫಲವಾಗಿದ್ದು, ಅದರ ಆಶಯವನ್ನು ಕ್ರಮೇಣವಾಗಿ ಮರು ಸಂರಚಿಸಲು ಆರ್.ಎಸ್.ಎಸ್ ಕೇಂದ್ರಿತ ಸಂಘಟನೆಗಳು ದೀರ್ಘಕಾಲದಿಂದ ಪ್ರಯತ್ನಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಸಂಸತ್ತಿನಲ್ಲಿ ನಡೆದ ಇತ್ತೀಚಿನ ವಿದ್ಯಮಾನಗಳು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಸಿದ್ಧಾಂತ ಅಥವಾ ಸಂಘಟನೆ ಸಂಪೂರ್ಣ ಅಧಿಕಾರವನ್ನು ತನ್ನ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿವೆ ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಪ್ರಕ್ರಿಯೆಯನ್ನು ಕೇವಲ ಬಿಜೆಪಿಯ ಸೋಲು ಅಥವಾ ಜಯದ ಪ್ರಶ್ನೆಯಾಗಿ ನೋಡುವುದಕ್ಕಿಂತ, ಅದು ಆರ್.ಎಸ್.ಎಸ್ ಸೈದ್ದಾಂತಿಕ ರಾಜಕೀಯ ವಿಸ್ತರಣೆಗೆ ಎದುರಾದ ಮೊದಲ ದೊಡ್ಡ ಹಿನ್ನಡೆಯಾಗಿದೆ ಎಂದು ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ನೂರು ವರ್ಷದ ಇತಿಹಾಸದಲ್ಲಿ ಸಮಾಜದೊಳಗಿನ ಜಾತಿ, ಧರ್ಮ, ನಂಬಿಕೆ ಹಾಗೂ ಜನರ ಭಾವನೆಗಳನ್ನು ರಾಜಕೀಯ ಉಪಕರಣಗಳಾಗಿ ಬಳಸಿಕೊಂಡು ಸಾಂಸ್ಕೃತಿಕ-ರಾಜಕೀಯ ಏಕಾಧಿಪತ್ಯದ ಕಲ್ಪನೆಯನ್ನು ಬೆಳೆಸಲು ಯತ್ನಿಸುತ್ತಿದೆ ಎಂಬುದು ತಮ್ಮ ಸ್ಪಷ್ಟ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷ ಅನ್ನು ಕೇವಲ ರಾಜಕೀಯ ಪಕ್ಷವೆಂದು ನೋಡಿದರೆ ವಿಶ್ಲೇಷಣೆ ಅಪೂರ್ಣವಾಗುತ್ತದೆ. ಅದು ಆರ್.ಎಸ್.ಎಸ್ ಸಿದ್ಧಾಂತಾತ್ಮಕ ಪ್ರಯೋಗಶಾಲೆಯಿಂದ ಹೊರಬಂದ ರಾಜಕೀಯ ರೂಪವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳು ತೋರಿಸಿದ ನಿಲುವು ಕೇವಲ ಮಸೂದೆಗಳ ವಿರುದ್ಧವಲ್ಲ; ಅದರ ಹಿಂದಿರುವ ಆರ್.ಎಸ್.ಎಸ್ ಕೇಂದ್ರಿತ ಸಿದ್ಧಾಂತಾತ್ಮಕ ಚಿಂತನೆಯನ್ನು ಎದುರಿಸಿದ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಈ ಹೋರಾಟ ಇನ್ನೂ ಮುಗಿದಿಲ್ಲ. ಇದು ಸಂಸತ್ತಿನ ಒಳಗೂ ಹೊರಗೂ ಮುಂದುವರಿಯುವ ಸಿದ್ಧಾಂತಗಳ ಸಂಘರ್ಷವಾಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಹಾಗೂ ರಾಹುಲ್ ಗಾಂಧಿ ಅವರ ಪಾತ್ರ ಮುಂದಿನ ದಿನಗಳಲ್ಲಿ ನಿರ್ಣಾಯಕವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa