ಕೃತಕ ಬುದ್ಧಿಮತ್ತೆ ನ್ಯಾಯಾಂಗಕ್ಕೆ ನೆರವು, ಆದರೆ ಮಾನವೀಯ ತೀರ್ಪಿಗೆ ಪರ್ಯಾಯವಲ್ಲ : ಸಿದ್ದರಾಮಯ್ಯ
ಬೆಂಗಳೂರು, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೃತಕ ಬುದ್ಧಿಮತ್ತೆ ನ್ಯಾಯಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಹತ್ವದ ಸಾಧನವಾಗಿದ್ದರೂ, ಅದು ಮಾನವೀಯ ತೀರ್ಪು ಮತ್ತು ನ್ಯಾಯಾಧೀಶರ ನೈತಿಕ ನಿರ್ಣಯಗಳಿಗೆ ಯಾವತ್ತೂ ಪರ್ಯಾಯವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರ
Cm


ಬೆಂಗಳೂರು, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೃತಕ ಬುದ್ಧಿಮತ್ತೆ ನ್ಯಾಯಾಂಗ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮಹತ್ವದ ಸಾಧನವಾಗಿದ್ದರೂ, ಅದು ಮಾನವೀಯ ತೀರ್ಪು ಮತ್ತು ನ್ಯಾಯಾಧೀಶರ ನೈತಿಕ ನಿರ್ಣಯಗಳಿಗೆ ಯಾವತ್ತೂ ಪರ್ಯಾಯವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಜಿಕೆವಿಕೆ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಡೆದ ನ್ಯಾಯಾಂಗ ಅಧಿಕಾರಿಗಳ 22ನೇ ದ್ವೈವಾರ್ಷಿಕ ರಾಜಮಟ್ಟದ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಕಾನೂನು ಮತ್ತು ತಂತ್ರಜ್ಞಾನ ಈಗ ಪ್ರತ್ಯೇಕ ಕ್ಷೇತ್ರಗಳಾಗಿಲ್ಲ. ಆಡಳಿತ, ಹಕ್ಕುಗಳು ಮತ್ತು ನ್ಯಾಯದ ಸ್ವರೂಪವನ್ನು ರೂಪಿಸುವ ಪರಸ್ಪರ ಸಂಬಂಧ ಹೊಂದಿರುವ ಶಕ್ತಿಗಳ ನಡುವೆ ನಾವು ನಿರ್ಣಾಯಕ ಹಂತದಲ್ಲಿ ನಿಂತಿದ್ದೇವೆ” ಎಂದು ಹೇಳಿದರು.

ಪ್ರಕರಣಗಳ ತ್ವರಿತ ನಿರ್ವಹಣೆ, ಕಾನೂನು ಸಂಶೋಧನೆ, ಬಾಕಿ ಇರುವ ಪ್ರಕರಣಗಳ ಇಳಿಕೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಸುಧಾರಿತ ಕಾರ್ಯನಿರ್ವಹಣೆಗೆ ಕೃತಕ ಬುದ್ಧಿಮತ್ತೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಇದೇ ಸಮಯದಲ್ಲಿ ಅಲ್ಗಾರಿದಮಿಕ್ ಪಕ್ಷಪಾತ, ಅಪಾರದರ್ಶಕ ನಿರ್ಧಾರಗಳು ಮತ್ತು ತಾಂತ್ರಿಕ ಅವಲಂಬನೆಯ ಅಪಾಯಗಳನ್ನೂ ಅವರು ಉಲ್ಲೇಖಿಸಿದರು.

“ನ್ಯಾಯಾಧೀಶರ ಅಧಿಕಾರವನ್ನು ಯಾವತ್ತೂ ಅಲ್ಗಾರಿದಮ್ ಮರೆಮಾಡಬಾರದು. ಸಾಂವಿಧಾನಿಕ ಮೌಲ್ಯಗಳು ತಾಂತ್ರಿಕ ಅಳವಡಿಕೆಗೆ ಮಾರ್ಗದರ್ಶನ ನೀಡಬೇಕು” ಎಂದು ಹೇಳಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ “ಸಾಂವಿಧಾನಿಕ ನೈತಿಕತೆಯು ಬೆಳೆಸಿಕೊಳ್ಳಬೇಕಾದ ಗುಣ” ಎಂಬ ಮಾತನ್ನು ಉಲ್ಲೇಖಿಸಿದರು.

ಡೀಪ್ಫೇಕ್ಗಳು, ಸಂಶ್ಲೇಷಿತ ಡೇಟಾ ಮತ್ತು ಡಿಜಿಟಲ್ ಪುರಾವೆಗಳ ದೃಢೀಕರಣವು ನ್ಯಾಯಾಂಗ ವ್ಯವಸ್ಥೆಗೆ ಹೊಸ ಸವಾಲುಗಳಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು. “ಡಿಜಿಟಲ್ ಯುಗದಲ್ಲಿ ವಿಶ್ವಾಸಾರ್ಹ ಪುರಾವೆಗಳು ಯಾವುವು ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆ ನ್ಯಾಯಾಲಯಗಳ ಮೇಲಿದೆ. ಸತ್ಯವು ಕೇವಲ ತಾಂತ್ರಿಕ ಅತ್ಯಾಧುನಿಕತೆಯಲ್ಲ, ಪರಿಶೀಲನೆ ಮತ್ತು ಸಮಗ್ರತೆಯಲ್ಲಿದೆ” ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆ ಸೂಕ್ತ ನಿಯಂತ್ರಣವಿಲ್ಲದೆ ಬಳಸಿದರೆ ಈಗಾಗಲೇ ಅಸ್ತಿತ್ವದಲ್ಲಿರುವ ಜಾತಿ, ವರ್ಗ ಮತ್ತು ಪ್ರವೇಶದ ಅಸಮಾನತೆಗಳನ್ನು ಮತ್ತಷ್ಟು ಬಲಪಡಿಸಬಹುದು ಎಂದು ಅವರು ಎಚ್ಚರಿಸಿದರು. “ಇದು ಡಿಜಿಟಲ್ ಸೋಶಿಯಲ್ ಡಾರ್ವಿನಿಸಂಗೆ ಕಾರಣವಾಗಬಹುದು” ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗೌತಮ ಬುದ್ಧ ಅವರ ಕರುಣೆ ಮತ್ತು ಬಸವಣ್ಣ ಅವರ ಸಮಾನತೆಯ ತತ್ವಗಳಿಂದ ಪ್ರೇರಿತವಾದ ನ್ಯಾಯದ ಅನ್ವೇಷಣೆ ಅಗತ್ಯವಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಇನ್ನೂ ಗಂಭೀರ ಸಮಸ್ಯೆಯಾಗಿದ್ದು, ನ್ಯಾಯದ ವೇಗ ಹೆಚ್ಚಿಸಲು ತಂತ್ರಜ್ಞಾನ ಜೊತೆಗೆ ಮೂಲಸೌಕರ್ಯ, ನ್ಯಾಯಾಂಗ ಸಾಮರ್ಥ್ಯ ಮತ್ತು ಆಧುನಿಕ ನ್ಯಾಯಾಲಯ ವ್ಯವಸ್ಥೆಗಳ ಅಗತ್ಯವಿದೆ ಎಂದು ಅವರು ಹೇಳಿದರು.

ದಕ್ಷಿಣ ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯ ಪ್ರವೇಶವನ್ನು ಸುಧಾರಿಸಲು ದೊಡ್ಡ ಹೆಜ್ಜೆಯಾಗಲಿದೆ ಎಂದರು.

ನ್ಯಾಯಾಂಗ ಮೂಲಸೌಕರ್ಯ, ಡಿಜಿಟಲ್ ಪರಿವರ್ತನೆ, ಖಾಲಿ ಹುದ್ದೆಗಳ ಭರ್ತಿ, ಸ್ಥಳೀಯ ಭಾಷೆಗಳಲ್ಲಿ ತೀರ್ಪುಗಳು, ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮತ್ತು ಕಾನೂನು ನೆರವು ವಿಸ್ತರಣೆಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

“ನ್ಯಾಯ ಎನ್ನುವುದು ಕೇವಲ ದೊರೆಯುವ ಹಕ್ಕಲ್ಲ; ಅದು ಉಳಿಸಬೇಕಾದ ನೈತಿಕ ಜವಾಬ್ದಾರಿ. ಯಾವುದೇ ಆಲ್ಗೊರಿದಮ್ ಸಹಾನುಭೂತಿ ಮತ್ತು ನೈತಿಕ ತರ್ಕವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande