
ನವದೆಹಲಿ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳಾ ಮೀಸಲು ಮಸೂದೆ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, 1996 ಮತ್ತು 2026ರ ನಡುವೆಯೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನೋಭಾವದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಆರೋಪಿಸಿದ್ದಾರೆ. ಮೂರು ದಶಕಗಳ ಹಿಂದಿನ ಕರಾಳ ಇತಿಹಾಸವೇ ಈಗ ಮತ್ತೆ ಮರುಕಳಿಸಿದೆ ಎಂದು ಅವರು ಹೇಳಿದ್ದಾರೆ.
1996ರಲ್ಲಿ ಎಚ್.ಡಿ.ದೇವೆಗೌಡ ಅವರ ನೇತೃತ್ವದ ಸಂಯುಕ್ತ ರಂಗ ಸರ್ಕಾರವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲು ಕಲ್ಪಿಸುವ ಉದ್ದೇಶದಿಂದ ಮಹತ್ವದ ಮಸೂದೆ ಮಂಡಿಸಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಘಟಿತವಾಗಿ ಆ ಪ್ರಯತ್ನವನ್ನು ವಿಫಲಗೊಳಿಸಿದ್ದವು ಎಂದು ಕುಮಾರಸ್ವಾಮಿ ದೂರಿದ್ದಾರೆ.
ಇದೇ ರೀತಿಯಲ್ಲಿ, ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲು ಮಸೂದೆಯನ್ನು ಮುಂದಿಟ್ಟಿದ್ದರು. ಆದರೆ ಮತ್ತೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮೋದಿ ಅವರ ಪ್ರಯತ್ನಕ್ಕೆ ಅಡ್ಡಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ಮೀಸಲು ಮಸೂದೆಯನ್ನು ವಿರೋಧಿಸಿದ ಶಕ್ತಿಗಳನ್ನು ದೇಶದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನವಾಗಿದ್ದು, ಇದಕ್ಕೆ ಕಾರಣರಾದವರು ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ದೇಶದ ಮಹಿಳೆಯರು ನಿರಾಶರಾಗಬಾರದು. ಮೋದಿ ಅವರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅಗ್ರಸ್ಥಾನ ದೊರೆಯಲಿದೆ. 33 ಶೇಕಡಾ ಮಹಿಳಾ ಮೀಸಲು ಗುರಿ ಖಂಡಿತ ಸಾಧನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa