
ಹುಬ್ಬಳ್ಳಿ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ‘ಸ್ವಚ್ಛ ಶನಿವಾರ’ ಅಭಿಯಾನದ ಅಂಗವಾಗಿ ಇಂದು ಹುಬ್ಬಳ್ಳಿ ವಲಯ ಕಚೇರಿ-2ರ ವ್ಯಾಪ್ತಿಯ ವಾರ್ಡ್ ನಂ. 14ರಲ್ಲಿ ಬರುವ ರಸೂಲ್ಪೂರ ಓಣಿ, ಗೌಳಿ ಗಲ್ಲಿ, ದರೋಗಾ ಓಣಿ, ಮೇಧಾರ್ ಓಣಿ ಹಾಗೂ ಜಮಾದಾರ ಗಲ್ಲಿಗಳಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು ಹಾಗೂ ವಾರ್ಡಿನ ಎಲ್ಲಾ ಜಮಾದಾರರು ಸಕ್ರಿಯವಾಗಿ ಪಾಲ್ಗೊಂಡರು. ಸ್ಥಳೀಯರು ಸಹ ಉತ್ಸಾಹದಿಂದ ಭಾಗವಹಿಸಿದ್ದು, ಸ್ವಚ್ಛತಾ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಗಲ್ಲಿಗಳಲ್ಲಿ ಕಸ ತೆರವು, ಚರಂಡಿ ಸ್ವಚ್ಛತೆ, ಸೊಳ್ಳೆ ನಿವಾರಕ ಕ್ರಮಗಳು ಹಾಗೂ ಸಾರ್ವಜನಿಕ ಪ್ರದೇಶಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಪರಿಸರವನ್ನು ಶುಚಿಯಾಗಿ ಮತ್ತು ಸುಂದರವಾಗಿ ಉಳಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ‘ಸ್ವಚ್ಛ ಶನಿವಾರ’ ಅಭಿಯಾನವು ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa