
ಬೆಂಗಳೂರು, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದ ಎಲ್ಲಾ ತಹಶೀಲ್ದಾರ್ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರು ಇಂದು ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದರು.
ಸಭೆಯಲ್ಲಿ ಭೂ ಸುರಕ್ಷಾ, ನ್ಯಾಯಾಲಯ ತಕರಾರು ಪ್ರಕರಣಗಳು, ಫೌತಿಖಾತೆ, ಪೋಡಿ ದುರಸ್ಥಿ, ಕಂದಾಯ ಗ್ರಾಮ ರಚನೆ ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಳ್ಳಲಾಯಿತು.
ವಿಶೇಷವಾಗಿ ಭೂ ದಾಖಲೆಗಳ ನಿರ್ವಹಣೆ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿ, ಫೌತಿಖಾತೆ ಪ್ರಕ್ರಿಯೆಗಳ ವೇಗವರ್ಧನೆ ಹಾಗೂ ಪೋಡಿ ದುರಸ್ಥಿ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸುವ ಕುರಿತು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಲ್ಲದೆ, ಹೊಸ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಪ್ರಗತಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಆಡಳಿತಾತ್ಮಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ರಾಜ್ಯದ ಜನರಿಗೆ ಕಂದಾಯ ಇಲಾಖೆಯ ಸೇವೆಗಳು ಇನ್ನಷ್ಟು ಸುಗಮವಾಗಿ ಮತ್ತು ವೇಗವಾಗಿ ದೊರಕುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa