
ಬೆಂಗಳೂರು, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಹೆಸರಘಟ್ಟದ ಮತ್ಕೂರು ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಹಕ್ಕಿಜ್ವರ ದೃಢಪಟ್ಟ ತಕ್ಷಣವೇ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಆರಂಭಿಸಿವೆ.
ಈಗಾಗಲೇ ಮತ್ಕೂರು ಗ್ರಾಮದ ಸುತ್ತಲಿನ 3 ಕಿಲೋಮೀಟರ್ ಪ್ರದೇಶವನ್ನು ಸೋಂಕಿತ ವಲಯ ಹಾಗೂ 10 ಕಿಲೋಮೀಟರ್ ವ್ಯಾಪ್ತಿಯನ್ನು ಕಣ್ಗಾವಲು ವಲಯ ಎಂದು ಘೋಷಿಸಿ ತೀವ್ರ ನಿಗಾ ವಹಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 7,444 ಕೋಳಿಗಳು ಮತ್ತು 14,788 ಮೊಟ್ಟೆಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಕಾರ್ಯದಲ್ಲಿ ತೊಡಗಿದ್ದ 10 ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಿ ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ.
ಮುಂದಿನ 10 ದಿನಗಳ ಕಾಲ ಸುತ್ತಮುತ್ತಲಿನ 19 ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಜ್ವರದ ಕಣ್ಗಾವಲು ನಡೆಸಲಿದ್ದಾರೆ. ಹೆಸರಘಟ್ಟ ಮತ್ತು ಸೊನ್ನೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಪಿಪಿಇ ಕಿಟ್ಗಳು, ಮಾಸ್ಕ್ ಹಾಗೂ ಔಷಧಗಳ ದಾಸ್ತಾನು ಲಭ್ಯವಿದೆ.
ಸಾರ್ವಜನಿಕರು ಅನಾರೋಗ್ಯ ಪೀಡಿತ ಅಥವಾ ಸತ್ತ ಹಕ್ಕಿಗಳ ಸಂಪರ್ಕಕ್ಕೆ ಬರಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಸ್ಥಳೀಯ ಆರೋಗ್ಯ ಇಲಾಖೆ ಅಥವಾ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಚೆನ್ನಾಗಿ ಬೇಯಿಸಿದ ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆ ಸುರಕ್ಷಿತವಾಗಿದ್ದು, ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa