
ನವದೆಹಲಿ, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳನ್ನು ಲೋಕ ಸಭೆಯಲ್ಲಿ ಮಂಡಿಸಲಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅರ್ಜುನ್ ರಾಮ್ ಮೇಘವಾಲ್ ಅವರು ಸಂವಿಧಾನ (131ನೇ ತಿದ್ದುಪಡಿ) ಮಸೂದೆ–2026 ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಇದೇ ವೇಳೆ ಅಮಿತ್ ಶಾ ಅವರು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ–2026 ಅನ್ನು ಸದನದಲ್ಲಿ ಮಂಡಿಸಿದರು.
ಈ ಮಸೂದೆಗಳನ್ನು ಮಂಡಿಸಿದ ತಕ್ಷಣವೇ ಪ್ರತಿಪಕ್ಷಗಳ ಪ್ರತಿಭಟನೆ ಆರಂಭವಾಯಿತು. ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಇನ್ನೊಂದೆಡೆ,ಧರ್ಮೇಂದ್ರ ಯಾದವ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡದ ಹೊರತು ಈ ಮಸೂದೆಗೆ ಪೂರ್ಣ ಅರ್ಥವಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಅಸಂವಿಧಾನಿಕವಾಗಿದ್ದು, ಅದರ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಖಿಲೇಶ ಯಾದವ ಕೂಡ ದೇಶದ ಅರ್ಧ ಜನಸಂಖ್ಯೆಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರೂ, ಮುಸ್ಲಿಂ ಮಹಿಳೆಯರಿಗೆ ಏನು ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಎತ್ತಿದರು.
ಇದಕ್ಕೆ ಉತ್ತರಿಸಿದ ಅಮಿತ್ ಶಾ, ಸಮಾಜವಾದಿ ಪಕ್ಷ ಬಯಸಿದರೆ ಮುಸ್ಲಿಂ ಮಹಿಳೆಯರಿಗೆ ತನ್ನ ಪಕ್ಷದ ಟಿಕೆಟ್ ನೀಡಬಹುದು, ಸರ್ಕಾರಕ್ಕೆ ಅದರಲ್ಲಿ ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದು ಹೇಳಿದರು.
ಪ್ರಸ್ತಾಪಿತ ತಿದ್ದುಪಡಿ ಪ್ರಕಾರ ಲೋಕ ಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ರಾಜ್ಯಗಳಿಗೆ 815 ಸ್ಥಾನಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 35 ಸ್ಥಾನಗಳು ಇರಲಿವೆ.
ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಳಿಕ ಸ್ಥಾನಗಳ ಅಂತಿಮ ಹಂಚಿಕೆ ನಡೆಯಲಿದ್ದು, ಪ್ರಸ್ತಾವಿತ ತಿದ್ದುಪಡಿ ಅಡಿಯಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಪ್ರಸ್ತಾಪವೂ ಸೇರಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa