
ಪಾಟ್ನಾ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಿಹಾರದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಸಂಭವಿಸಿದ್ದು, ಇಂದಿನಿಂದ ರಾಜ್ಯದ ಅಧಿಕಾರ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರ ಕೈಗೆ ಸೇರುತ್ತಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಶಾಸಕಾಂಗ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾಗಿರುವ ಸಾಮ್ರಾಟ್ ಚೌಧರಿ ಅವರು ಇಂದು ಬೆಳಿಗ್ಗೆ 10.50ಕ್ಕೆ ಲೋಕ ಭವನದಲ್ಲಿ ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಉಪ ಮುಖ್ಯಮಂತ್ರಿಯಾಗಿದ್ದ ಸಾಮ್ರಾಟ್ ಚೌಧರಿ ಅವರು ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಲಿದ್ದು, ಇದರಿಂದ ರಾಜ್ಯದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ.
ನಿನ್ನೆ ಸಂಜೆ ಬಿಜೆಪಿ ಹಾಗೂ ಎನ್.ಡಿ.ಎ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಸಾಮ್ರಾಟ್ ಚೌಧರಿ ಅವರು ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ, ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್, ಜಿತನ್ ರಾಮ್ ಮಾಂಝಿ, ಮಾಜಿ ಸಚಿವ ವಿಜಯ್ ಕುಮಾರ್ ಚೌಧರಿ, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಸರಾವಗಿ, ಆರ್ಎಲ್ಎಂಒ ಅಧ್ಯಕ್ಷ ಉಪೇಂದ್ರ ಕುಶ್ವಾಹ ಹಾಗೂ ಎಲ್ಜೆಪಿ ಸಂಸದ ಅರುಣ್ ಭಾರತಿ ಉಪಸ್ಥಿತರಿದ್ದರು.
ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿದಂತೆ ಎನ್.ಡಿ.ಎ ಯ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಬಿಹಾರ ಬಿಜೆಪಿ ಉಸ್ತುವಾರಿ ವಿನೋದ್ ತಾವ್ಡೆ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ನವದೆಹಲಿಯಿಂದ ಪಾಟ್ನಾಕ್ಕೆ ಆಗಮಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮಂಗಳವಾರ ಬೆಳಿಗ್ಗೆ ಆರಂಭವಾಯಿತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸಂಪುಟದ ಕೊನೆಯ ಸಭೆಯಲ್ಲಿ ಭಾಗವಹಿಸಿದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು. ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾಮ್ರಾಟ್ ಚೌಧರಿ ಅವರ ಹೆಸರನ್ನು ನಾಯಕ ಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಪ್ರಸ್ತಾಪಿಸಿದರು. ಮಾಜಿ ಸಚಿವ ಮಂಗಲ್ ಪಾಂಡೆ, ಡಾ. ದಿಲೀಪ್ ಕುಮಾರ್ ಜೈಸ್ವಾಲ್, ಮಾಜಿ ಉಪಮುಖ್ಯಮಂತ್ರಿ ರೇಣು ದೇವಿ ಮತ್ತು ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಅವರು ಈ ಪ್ರಸ್ತಾವನೆಯನ್ನು ಬೆಂಬಲಿಸಿದರು.
ನಂತರ ಶಿವರಾಜ್ ಸಿಂಗ್ ಚೌಹಾಣ್ ಅವರು ಸಾಮ್ರಾಟ್ ಚೌಧರಿಯನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿಸಿದರು. ಬಳಿಕ ವಿಧಾನಸಭೆಯ ಸೆಂಟ್ರಲ್ ಹಾಲ್ನಲ್ಲಿ ನಡೆದ ಎನ್.ಡಿ.ಎ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಅವರು ಸಾಮ್ರಾಟ್ ಚೌಧರಿಯನ್ನು ಎನ್.ಡಿ.ಎ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿಸಿದರು.
ಸುಮಾರು ಎರಡು ದಶಕಗಳ ಕಾಲ ಬಿಹಾರದ ರಾಜಕೀಯವನ್ನು ಮುನ್ನಡೆಸಿದ ನಿತೀಶ್ ಕುಮಾರ್ ಯುಗಕ್ಕೆ ತೆರೆ ಬಿದ್ದಿದ್ದು, ಇಂದಿನಿಂದ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa