
ಬೆಂಗಳೂರು, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದ ಅಭಿವೃದ್ಧಿ, ಬಾಕಿ ಉಳಿದಿರುವ ಕೇಂದ್ರ ಅನುದಾನಗಳು ಹಾಗೂ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವಿಸ್ತೃತ ಮನವಿ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿಯವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡು ನಂತರ ಮನವಿ ಸಲ್ಲಿಸಿದರು.
ಕರ್ನಾಟಕವು ದೇಶದ ಆರ್ಥಿಕತೆ, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಕೃಷಿ ಹಾಗೂ ಸೇವಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ರಾಜ್ಯವಾಗಿದ್ದು, ಸಹಕಾರಿ ಸಂಘೀಯತೆಯ ತತ್ವಗಳಿಗೆ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಹಲವು ಪ್ರಮುಖ ಯೋಜನೆಗಳು ಹಾಗೂ ಅನುದಾನಗಳು ದೀರ್ಘಕಾಲದಿಂದ ಬಾಕಿ ಉಳಿದಿರುವುದರಿಂದ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕೋಲಾರದಲ್ಲಿ ರೈಲು ಕೋಚ್ ಕಾರ್ಖಾನೆ ಸ್ಥಾಪನೆ, ಬೆಂಗಳೂರು-ಮೈಸೂರು ಹೈ-ಸ್ಪೀಡ್ ರೈಲು ಮಾರ್ಗ, ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ನೆರವು ಹಾಗೂ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಕ್ಕೆ ಒತ್ತಾಯಿಸಿದೆ.
ಅದೇ ರೀತಿ, ಜಲ ಜೀವನ ಮಿಷನ್ ಅಡಿಯಲ್ಲಿ ₹17,554 ಕೋಟಿ ಬಾಕಿ ಕೇಂದ್ರ ಪಾಲು, ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ₹2,860 ಕೋಟಿ ಅನುದಾನ, ಆದಾಯ ಕೊರತೆ ಭರ್ತಿಗೆ ₹5,495 ಕೋಟಿ ಹಾಗೂ ಬೆಂಗಳೂರಿಗೆ ವಿಶೇಷವಾಗಿ ₹26,000 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಮೆಕೆದಾಟು ಕುಡಿಯುವ ನೀರಿನ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ನೆರವು, ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-II ವರದಿ ಗೆಜೆಟ್ ಪ್ರಕಟಣೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮಹದಾಯಿ ಅಡಿಯಲ್ಲಿ ಕಳಸಾ ನಾಲಾ ಯೋಜನೆಗೆ ವನ್ಯಜೀವಿ ಅನುಮೋದನೆ, ನದಿಗಳ ಅಂತರ ಸಂಪರ್ಕ ಯೋಜನೆಗಳಲ್ಲಿ ಕರ್ನಾಟಕಕ್ಕೆ ನ್ಯಾಯಸಮ್ಮತ ನೀರಿನ ಹಂಚಿಕೆ, ರಾಜ್ಯದ 56 ಶೇಕಡಾ ಮೀಸಲಾತಿ ನೀತಿಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವುದಕ್ಕೂ ಸರ್ಕಾರ ಒತ್ತಾಯಿಸಿದೆ.
ಇದಲ್ಲದೆ, ಕಲ್ಯಾಣ ಕರ್ನಾಟಕಕ್ಕೆ ವರ್ಷಕ್ಕೆ ₹5,000 ಕೋಟಿ ವಿಶೇಷ ಅನುದಾನ, ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಸಾರ್ವಜನಿಕ ವಲಯದ ಘಟಕ ಸ್ಥಾಪನೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಶೀಘ್ರ ಅನುಮೋದನೆ ಹಾಗೂ ರಾಯಚೂರಿನಲ್ಲಿ ಏಮ್ಸ ಸ್ಥಾಪನೆಗೂ ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿದೆ.
ಕರ್ನಾಟಕದ ಜನರ ಪರವಾಗಿ ಈ ಎಲ್ಲಾ ವಿಷಯಗಳಿಗೆ ತ್ವರಿತ ಸ್ಪಂದನೆ ನೀಡುವಂತೆ ಮನವಿ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಹಿತಾಸಕ್ತಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa