ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಪ್ರಮಾಣ ವಚನ
ಪಾಟ್ನಾ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಿಹಾರದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದ್ದು, ಬಿಜೆಪಿ ಹಾಗೂ ಎನ್ಡಿಎ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರು ಬುಧವಾರ ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಜೆಡಿಯು ನಾಯಕರು ವ
ಸಾಮ್ರಾಟ ಚೌದರಿ


ಪಾಟ್ನಾ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಿಹಾರದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗಿದ್ದು, ಬಿಜೆಪಿ ಹಾಗೂ ಎನ್ಡಿಎ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರು ಬುಧವಾರ ಬಿಹಾರದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಜೆಡಿಯು ನಾಯಕರು ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಪ್ರಸಾದ್ ಯಾದವ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪಾಟ್ನಾ ನಗರದ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸೈಯದ್ ಅತಾ ಹಸ್ನೈನ್ ಅವರು ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಾಮ್ರಾಟ್ ಚೌಧರಿ ಮುಖ್ಯಮಂತ್ರಿಯಾಗುವುದರೊಂದಿಗೆ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಹೊಸ ರೂಪ ಸಿಕ್ಕಂತಾಗಿದೆ.

1968ರ ನವೆಂಬರ್ 16ರಂದು ಮುಂಗೇರಿನ ಲಖನ್ಪುರ ಗ್ರಾಮದಲ್ಲಿ ಜನಿಸಿದ ಸಾಮ್ರಾಟ್ ಚೌಧರಿ, ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಶಕುನಿ ಚೌಧರಿ ಮತ್ತು ತಾಯಿ ಪಾರ್ವತಿ ದೇವಿ ಇಬ್ಬರೂ ಬಿಹಾರ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಪ್ರಾಥಮಿಕ ಶಿಕ್ಷಣದ ಬಳಿಕ ಅವರು ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ಕೋಯ್ರಿ-ಕುಶ್ವಾಹ ಸಮುದಾಯಕ್ಕೆ ಸೇರಿದ ಅವರು ಬಿಜೆಪಿಯ ಪ್ರಮುಖ ಹಿಂದುಳಿದ ವರ್ಗದ ಮುಖವಾಗಿ ಗುರುತಿಸಿಕೊಂಡಿದ್ದಾರೆ.

1990ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಸಾಮ್ರಾಟ್ ಚೌಧರಿ, 1999ರಲ್ಲಿ ರಾಬ್ಡಿದೇವಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿದರು. ನಂತರ ಅವರು ನಗರಾಭಿವೃದ್ಧಿ, ಆರೋಗ್ಯ, ಪಂಚಾಯತ್ ರಾಜ್ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದರು. 2021ರಲ್ಲಿ ನಿತೀಶ್ ಕುಮಾರ್ ಸಚಿವ ಸಂಪುಟದಲ್ಲಿ ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2023ರಲ್ಲಿ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ನಂತರ ಸಾಮ್ರಾಟ್ ಚೌಧರಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಪ್ರಭಾವಶಾಲಿ ನಾಯಕರಾಗಿ ಹೊರಹೊಮ್ಮಿದರು. ಬಿಹಾರದಲ್ಲಿ ಕೋಯ್ರಿ-ಕುಶ್ವಾಹ ಮತದಾರರನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಅವರನ್ನು ಮುಂದಿರಿಸಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.

ಸಾಮ್ರಾಟ್ ಚೌಧರಿ ಅವರ ನಾಯಕತ್ವದಲ್ಲಿ ಬಿಹಾರದಲ್ಲಿ ಬಿಜೆಪಿ ತನ್ನ ರಾಜಕೀಯ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ. ನೂತನ ಸರ್ಕಾರದ ಮುಂದೆ ಅಭಿವೃದ್ಧಿ, ಉದ್ಯೋಗ, ಮೂಲಸೌಕರ್ಯ ಮತ್ತು ಕಾನೂನು ಸುವ್ಯವಸ್ಥೆ ಪ್ರಮುಖ ಸವಾಲುಗಳಾಗಿ ಎದುರಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande