
ಢಾಕಾ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಚ್ಚಾ ತೈಲದ ತೀವ್ರ ಕೊರತೆಯಿಂದಾಗಿ ಬಾಂಗ್ಲಾದೇಶದ ಏಕೈಕ ಸರ್ಕಾರಿ ತೈಲ ಸಂಸ್ಕರಣಾಗಾರವಾದ ಈಸ್ಟರ್ನ್ ರಿಫೈನರಿಯ ಎರಡು ಪ್ರಮುಖ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
ಚಿತ್ತಗಾಂಗ್ನಲ್ಲಿರುವ ಈ ಸಂಸ್ಕರಣಾಗಾರದಲ್ಲಿ ಮಂಗಳವಾರ ಮಧ್ಯಾಹ್ನದಿಂದ ಎರಡು ಘಟಕಗಳ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಮೂರನೇ ಘಟಕವು ಭಾಗಶಃ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಆಕ್ಟೇನ್ ಉತ್ಪಾದನೆ ನಡೆಯುತ್ತಿದೆ.
ಇಂಧನ ಮತ್ತು ಖನಿಜ ಸಂಪನ್ಮೂಲ ವಿಭಾಗದ ವಕ್ತಾರ ಮೋನಿರ್ ಹೊಸೇನ್ ಚೌಧರಿ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಆದರೆ ಸಂಸ್ಕರಣಾಗಾರದ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಮೂಲಗಳ ಪ್ರಕಾರ, ಕಚ್ಚಾ ತೈಲ ಪೂರೈಕೆಯ ಕೊರತೆಯಿಂದ ಈ ಬಿಕ್ಕಟ್ಟು ಉಂಟಾಗಿದ್ದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದರ ಪರಿಣಾಮವಾಗಿ ವಿಧಿಸಲಾದ ನಿರ್ಬಂಧಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ ಕಚ್ಚಾ ತೈಲದ ಒಂದು ದೊಡ್ಡ ರವಾನೆ ಕಾರಣವಾಗಿ ಈ ತಿಂಗಳ ಆರಂಭದಿಂದಲೂ ಸಂಸ್ಕರಣಾಗಾರದ ಮೀಸಲುಗಳು ಕ್ಷೀಣಿಸಲು ಆರಂಭಿಸಿವೆ.
ಏಪ್ರಿಲ್ 5ರಿಂದಲೇ ಸಂಸ್ಕರಣಾಗಾರವು ಪರ್ಯಾಯ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಸಾಮಾನ್ಯವಾಗಿ ದಿನಕ್ಕೆ ಸುಮಾರು 4,500 ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಈ ಸಂಸ್ಥೆ, ಆಕ್ಟೇನ್, ಪೆಟ್ರೋಲ್, ಡೀಸೆಲ್ ಮತ್ತು ಫರ್ನೇಸ್ ತೈಲ ಸೇರಿದಂತೆ ಸುಮಾರು 13 ವಿಧದ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಆದರೆ ಕಳೆದ ಒಂದು ತಿಂಗಳಿನಿಂದ ಉತ್ಪಾದನೆ ಈಗಾಗಲೇ ದಿನಕ್ಕೆ ಸುಮಾರು 3,500 ಟನ್ಗೆ ಇಳಿದಿತ್ತು.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿನ ಅಸ್ಥಿರತೆಯಿಂದಾಗಿ ಕಳೆದ ಎರಡು ತಿಂಗಳುಗಳಿಂದ ಕಚ್ಚಾ ತೈಲ ಆಮದು ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ. ಮುಂದಿನ ಕಚ್ಚಾ ತೈಲದ ಸರಕು ಮೇ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ.
ಈ ಸಂಸ್ಕರಣಾಗಾರವು ಸುಮಾರು 1.5 ಲಕ್ಷ ಟನ್ ಕಚ್ಚಾ ತೈಲ ಸಂಗ್ರಹ ಸಾಮರ್ಥ್ಯ ಹಾಗೂ 2.5 ಲಕ್ಷ ಟನ್ ಸಂಸ್ಕರಿಸಿದ ಇಂಧನ ಸಂಗ್ರಹ ಸಾಮರ್ಥ್ಯ ಹೊಂದಿದೆ.
ಸಂಸ್ಕರಣಾಗಾರದಲ್ಲಿ ಉತ್ಪಾದನೆ ಸ್ಥಗಿತಗೊಂಡಿದ್ದರೂ ದೇಶದಲ್ಲಿ ತಕ್ಷಣದ ಇಂಧನ ಕೊರತೆಯ ಭೀತಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದೇಶದಲ್ಲಿ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಸಾಕಷ್ಟು ನಿಕ್ಷೇಪಗಳಿದ್ದು, ಸಂಘರ್ಷ ಆರಂಭವಾದ ಬಳಿಕ ಸರ್ಕಾರವು ಹೆಚ್ಚಿನ ಬೆಲೆಗೆ ಇಂಧನವನ್ನು ಖರೀದಿಸಿರುವುದಾಗಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa