ಹಾರ್ಮುಜ್ ದಿಗ್ಬಂಧನ ; ಇರಾನ್-ಅಮೆರಿಕ ಮತ್ತೆ ಮಾತುಕತೆ ಸಾಧ್ಯತೆ
ವಾಷಿಂಗ್ಟನ್, 14 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹಾರ್ಮುಜ್ ಜಲಸಂಧಿ ಸೇರಿದಂತೆ ಇರಾನಿನ ಪ್ರಮುಖ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯ ದಿಗ್ಬಂಧನ ಜಾರಿಯಾದ ಬೆನ್ನಲ್ಲೇ ಪಾಶ್ಚಾತ್ಯ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಲ್ಲಿ ಕೆಲವು ಮಟ್ಟಿನ ತಣಿವು ಕಾಣಿಸಿಕೊಂಡಿದೆ. ಡೊನಾಲ್ಡ್ ಟ್ರಂಪ ನೇತೃತ್ವದ ಅಮೆರಿಕ
File photo


ವಾಷಿಂಗ್ಟನ್, 14 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹಾರ್ಮುಜ್ ಜಲಸಂಧಿ ಸೇರಿದಂತೆ ಇರಾನಿನ ಪ್ರಮುಖ ಬಂದರುಗಳ ಮೇಲೆ ಅಮೆರಿಕದ ನೌಕಾಪಡೆಯ ದಿಗ್ಬಂಧನ ಜಾರಿಯಾದ ಬೆನ್ನಲ್ಲೇ ಪಾಶ್ಚಾತ್ಯ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯಲ್ಲಿ ಕೆಲವು ಮಟ್ಟಿನ ತಣಿವು ಕಾಣಿಸಿಕೊಂಡಿದೆ.

ಡೊನಾಲ್ಡ್ ಟ್ರಂಪ ನೇತೃತ್ವದ ಅಮೆರಿಕ ಸರ್ಕಾರದ ಕಠಿಣ ಕ್ರಮದ ಪರಿಣಾಮವಾಗಿ ಇರಾನ್ ತನ್ನ ನಿಲುವನ್ನು ಮೃದುಗೊಳಿಸಿರುವ ಸೂಚನೆಗಳು ವ್ಯಕ್ತವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ನಾಳೆ ಪುನರಾರಂಭವಾಗುವ ಸಾಧ್ಯತೆ ಇದೆ.

ಅಲ್ ಜಜೀರಾ ಮತ್ತು ಫಾಕ್ಸ್ ನ್ಯೂಸ್ ವರದಿಗಳ ಪ್ರಕಾರ, ಇರಾನ್ ಮಾತುಕತೆಗೆ ಸಿದ್ಧತೆಯನ್ನು ತೋರಿಸಿದ್ದು, “ಚೆಂಡು ಈಗ ಇರಾನ್ ಅಂಗಳದಲ್ಲಿದೆ” ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ತಿಳಿಸಿದ್ದಾರೆ. ಇಸ್ಲಾಮಾಬಾದ್ನಲ್ಲಿ ನಡೆದ ಹಿಂದಿನ ಸುತ್ತಿನ ಮಾತುಕತೆ ವೈಫಲ್ಯದ ಬಳಿಕ, ಅಮೆರಿಕವು ಇರಾನ್ಗೆ ಯುರೇನಿಯಂ ಪುಷ್ಟೀಕರಣವನ್ನು 20 ವರ್ಷಗಳ ಕಾಲ ನಿಷೇಧಿಸುವ ಪ್ರಸ್ತಾಪವನ್ನು ನೀಡಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಐದು ವರ್ಷಗಳ ಮಿತಿಯೊಂದಿಗೆ ಪ್ರತಿ-ಪ್ರಸ್ತಾಪವನ್ನು ಮಂಡಿಸಿದೆ.

ಮೂಲಗಳ ಪ್ರಕಾರ, ಏಪ್ರಿಲ್ 21ರಂದು ಅಂತ್ಯಗೊಳ್ಳಲಿರುವ ಕದನ ವಿರಾಮಕ್ಕೂ ಮುನ್ನವೇ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾತುಕತೆಗಳನ್ನು ತ್ವರಿತಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತೊಮ್ಮೆ ಆತಿಥೇಯವಾಗುವ ಸಾಧ್ಯತೆ ಇದ್ದು, ಜಿನೀವಾ ಕೂಡ ಪರಿಗಣನೆಯಲ್ಲಿ ಇದೆ.

ಅಮೆರಿಕದ ಕಠಿಣ ದಿಗ್ಬಂಧನ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುವ ಆತಂಕ ವ್ಯಕ್ತವಾಗಿರುವ ಹಿನ್ನೆಲೆ, ಉಭಯ ರಾಷ್ಟ್ರಗಳು ತಾತ್ವಿಕವಾಗಿ ಮಾತುಕತೆಗೆ ಒಪ್ಪಿಕೊಂಡಿವೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಆದರೆ, ಈ ಮಾತುಕತೆಯಲ್ಲಿ ಭಾಗವಹಿಸುವ ನಿಯೋಗದ ಮಟ್ಟ ಇನ್ನೂ ಸ್ಪಷ್ಟವಾಗಿಲ್ಲ.

ಈ ನಡುವೆ, ಅಮೆರಿಕ ಅಧ್ಯಕ್ಷ ಟ್ರಂಪ್ “ಇರಾನ್ ಸಾಮಾನ್ಯ ರಾಷ್ಟ್ರವಾಗಿ ನಡೆದುಕೊಂಡರೆ, ಅದರ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡಲು ನಾವು ಸಿದ್ಧ” ಎಂದು ಹೇಳಿದ್ದು, ಆದರೆ ಅದರಿಗಾಗಿ ಪರಮಾಣು ಶಸ್ತ್ರಾಸ್ತ್ರ ಯೋಜನೆಗಳನ್ನು ತ್ಯಜಿಸಬೇಕೆಂದು ಷರತ್ತು ವಿಧಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಟುವಟಿಕೆಗಳು ಜೋರಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇರಾನ್ನ ಪುಷ್ಟೀಕರಿಸಿದ ಯುರೇನಿಯಂ ಸ್ವೀಕರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸ್ಪಷ್ಟನೆ ನೀಡಿದ್ದು, ಪ್ರಸ್ತಾವ ಇನ್ನೂ ಚರ್ಚೆಯಲ್ಲೇ ಇದೆ ಎಂದಿದ್ದಾರೆ.

ಇದೇ ವೇಳೆ, ಮಧ್ಯಪೂರ್ವದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಪ್ರತಿನಿಧಿಗಳು ಇಸ್ರೇಲ್-ಲೆಬನಾನ್ ನಡುವಿನ ಮಾತುಕತೆಗಳನ್ನು ಮುಂದುವರಿಸಲು ತಯಾರಾಗಿದ್ದಾರೆ. ಇದು 1993ರ ನಂತರದ ಮೊದಲ ಪ್ರಮುಖ ರಾಜತಾಂತ್ರಿಕ ಸಂಪರ್ಕವೆಂದು ಹೇಳಲಾಗಿದೆ.

ಒಟ್ಟಿನಲ್ಲಿ, ಹಾರ್ಮುಜ್ ದಿಗ್ಬಂಧನದಿಂದ ಉಂಟಾದ ಒತ್ತಡವು ಈಗ ರಾಜತಾಂತ್ರಿಕ ಚರ್ಚೆಗಳತ್ತ ದಾರಿ ಮಾಡಿಕೊಡುತ್ತಿರುವುದು ಸ್ಪಷ್ಟವಾಗಿದ್ದು, ಮುಂದಿನ ಕೆಲ ದಿನಗಳು ಈ ಪ್ರದೇಶದ ಭವಿಷ್ಯ ನಿರ್ಧಾರದಲ್ಲಿ ನಿರ್ಣಾಯಕವಾಗಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande