
ನವದೆಹಲಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕುರಿತ ಮಹತ್ವದ ಸಂವಿಧಾನ ತಿದ್ದುಪಡಿ ಚರ್ಚೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ದೇಶದ ಮಹಿಳೆಯರನ್ನು ಉದ್ದೇಶಿಸಿ ಮನವಿ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡ ಈ ಪತ್ರದಲ್ಲಿ, ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ 2029ರ ಲೋಕ ಸಭಾ ಮತ್ತು ವಿಧಾನ ಸಭಾ ಚುನಾವಣೆಗಳಿಂದ ಮಹಿಳಾ ಮೀಸಲಾತಿ ಜಾರಿಗೆ ತರುವ ಸಂಕಲ್ಪವನ್ನು ಪುನರುಚ್ಚರಿಸಿದ್ದಾರೆ.
ಏಪ್ರಿಲ್ 14ರಂದು ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ, ಸಂವಿಧಾನದ ಸಮಾನತೆ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳಿಗೆ ಅನುಗುಣವಾಗಿ ಏಪ್ರಿಲ್ 16ರಿಂದ ಸಂಸತ್ತಿನಲ್ಲಿ ‘ನಾರಿ ಶಕ್ತಿ ವಂದನಾ ಕಾಯ್ದೆ’ ಕುರಿತು ಚರ್ಚೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಐತಿಹಾಸಿಕ ತಿದ್ದುಪಡಿಗೆ ದೇಶವಾಸಿಗಳ ಆಶೀರ್ವಾದ ಮತ್ತು ವಿಶೇಷವಾಗಿ ಮಹಿಳೆಯರ ಬೆಂಬಲ ಅಗತ್ಯವಿದೆ ಎಂದು ಅವರು ಮನವಿ ಮಾಡಿದ್ದಾರೆ.
ಮಹಿಳೆಯರು ವಿಜ್ಞಾನ, ಕ್ರೀಡೆ, ಶಿಕ್ಷಣ, ಕಲೆ, ಉದ್ಯಮಶೀಲತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ನೀತಿ ನಿರೂಪಣೆಯಲ್ಲಿಯೂ ಅವರ ಪಾಲ್ಗೊಳ್ಳುವಿಕೆ ಹೆಚ್ಚಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯದೊಂದಿಗೆ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಲಭ್ಯವಾಗಿದ್ದರೂ, ಶಾಸಕಾಂಗದಲ್ಲಿ ಅವರ ಸಮರ್ಪಕ ಪ್ರತಿನಿಧಿತ್ವ ಇನ್ನೂ ಸಂಪೂರ್ಣವಾಗಿ ಸಾಧಿಸಲ್ಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಗೆ ನಾರೀ ಶಕ್ತಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಒತ್ತಿಹೇಳಿದ ಅವರು, ಮಹಿಳಾ ಮೀಸಲಾತಿ ಜಾರಿಗೆ ಬಂದರೆ ಪ್ರಜಾಪ್ರಭುತ್ವ ಮತ್ತಷ್ಟು ಬಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ದಿಕ್ಕಿನಲ್ಲಿ ಯಾವುದೇ ವಿಳಂಬವು ನಾರೀ ಶಕ್ತಿಗೆ ಅನ್ಯಾಯವಾಗಲಿದೆ ಎಂದು ಹೇಳಿದರು.
ಈ ಐತಿಹಾಸಿಕ ಮಸೂದೆಯನ್ನು ಅಂಗೀಕರಿಸಲು ಮಹಿಳೆಯರು ತಮ್ಮ ಸಂಸದರಿಗೆ ಪತ್ರ ಬರೆದು ಬೆಂಬಲ ಸೂಚಿಸುವಂತೆ ಪ್ರಧಾನಿ ಕರೆ ನೀಡಿದ್ದಾರೆ. ಪತ್ರದ ಕೊನೆಯಲ್ಲಿ, ಮುಂಬರುವ ಹಬ್ಬಗಳ ನಿಮಿತ್ತ ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿ, ಅವರ ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa