
ನವದೆಹಲಿ, 14 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಟಾಟಾ ಗ್ರೂಪ್ ನೇತೃತ್ವದ ಏರ್ ಇಂಡಿಯಾ ತನ್ನ ವೈಡ್-ಬಾಡಿ ವಿಮಾನಗಳ ನವೀಕರಣ ಕಾರ್ಯಕ್ರಮದ ಭಾಗವಾಗಿ ಮೊದಲ ಮರು ವಿನ್ಯಾಸಗೊಳಿಸಿದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವನ್ನು ದೆಹಲಿಗೆ ತರಿಸಿದೆ. ವಿಟಿ-ಎಎನ್ಟಿ ನೋಂದಣಿಯ ಈ ವಿಮಾನವು ಅಮೆರಿಕದ ಸ್ಯಾನ್ ಬರ್ನಾರ್ಡಿನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಹಾರಾಟ ನಡೆಸಿ ಸೋಮವಾರ ತಡರಾತ್ರಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ವಿಮಾನಯಾನ ಸಂಸ್ಥೆಯ ಹೇಳಿಕೆಯ ಪ್ರಕಾರ, ಇದು 26 ವೈಡ್-ಬಾಡಿ ವಿಮಾನಗಳ ಸಮಗ್ರ ನವೀಕರಣ ಯೋಜನೆಯಡಿ ಪೂರ್ಣಗೊಂಡ ಮೊದಲ ವಿಮಾನವಾಗಿದ್ದು, ಕ್ಯಾಬಿನ್ ಸಂಪೂರ್ಣ ಮರು ವಿನ್ಯಾಸಗೊಳಿಸಲಾಗಿದೆ. ಹೊಸ ಆಸನ ವ್ಯವಸ್ಥೆ, ಅತ್ಯಾಧುನಿಕ ಮನರಂಜನಾ ವ್ಯವಸ್ಥೆ ಹಾಗೂ ಪ್ರೀಮಿಯಂ ಎಕಾನಮಿ ವಿಭಾಗವನ್ನು ಈ ವಿಮಾನ ಒಳಗೊಂಡಿದೆ.
ಮೂರು ವರ್ಷಗಳ ಹಿಂದೆ ಸುಮಾರು 400 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಆರಂಭಿಸಿದ ಈ ಯೋಜನೆಯಡಿ, ಕಂಪನಿಯ 27 ಡ್ರೀಮ್ಲೈನರ್ಗಳು ಮತ್ತು 13 ಬಿ777 ವಿಮಾನಗಳನ್ನು ನವೀಕರಿಸುವ ಉದ್ದೇಶ ಹೊಂದಿತ್ತು. ಆದರೆ ಪೂರೈಕೆ ಸರಪಳಿ ಸಮಸ್ಯೆಗಳು ಹಾಗೂ ಭೌಗೋಳಿಕ ರಾಜಕೀಯ ಕಾರಣಗಳಿಂದ ಯೋಜನೆ ವಿಳಂಬಗೊಂಡಿತ್ತು.
ಈ ವೈಡ್-ಬಾಡಿ ಫ್ಲೀಟ್ ಮುಖ್ಯವಾಗಿ ಯುರೋಪ್, ಅಮೆರಿಕ ಮತ್ತು ದೂರ ಪೂರ್ವ ದೇಶಗಳಿಗೆ ದೀರ್ಘ ದೂರದ ಹಾರಾಟಗಳಿಗೆ ಬಳಸಲಾಗುತ್ತದೆ. ನವೀಕರಿಸಿದ ಈ ವಿಮಾನ ಸೇವೆಗೆ ಸಿದ್ಧವಾದ ನಂತರ ಯುಕೆ, ಯುರೋಪ್, ಯುಎಸ್ಎ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಕಂಪನಿ ತಿಳಿಸಿದೆ.
“ನಮ್ಮ ಮೊದಲ ರೆಟ್ರೋಫಿಟೆಡ್ ಬೋಯಿಂಗ್ 787-8 ಆಗಮನವು ಫ್ಲೀಟ್ ಪರಿವರ್ತನೆಯ ಪ್ರಮುಖ ಮೈಲಿಗಲ್ಲಾಗಿದೆ. ಇದು ಪ್ರಯಾಣಿಕರಿಗೆ ಸುಧಾರಿತ ಹಾರಾಟ ಅನುಭವವನ್ನು ನೀಡುವ ಆರಂಭವಾಗಿದೆ,” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa