
ಗದಗ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ 1919ರ ಏಪ್ರಿಲ್ 13 ಎಂದಿಗೂ ಮರೆಯಲಾಗದ ಕಪ್ಪು ದಿನವಾಗಿದ್ದು, ಅಮೃತಸರದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದೇಶದ ಮನಸ್ಸನ್ನು ನಡುಗಿಸಿದ ಘಟನೆ ಎಂದು ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ಅಧ್ಯಕ್ಷೆ ಶಕುಂತಲಾ ಮುಳಗುಂದ ಹೇಳಿದರು.
ನಗರದ ಸದ್ಗುರು ಸಚ್ಚಿದಾನಂದ ಮಠದಲ್ಲಿ ದಾರಿದೀಪ ಮಹಿಳಾ ವಿವಿಧೋದ್ದೇಶಗಳ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ “ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಮರಣೆ ಹಾಗೂ ಹುತಾತ್ಮರಿಗೆ ಗೌರವ ನಮನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಬೈಸಾಕಿ ಹಬ್ಬದ ಸಂಭ್ರಮದಲ್ಲಿದ್ದ ಸಾವಿರಾರು ನಿರಾಯುಧ ಭಾರತೀಯರ ಮೇಲೆ ಬ್ರಿಟಿಷ್ ಸೇನೆಯ ಜನರಲ್ ಡೈಯರ್ ನಡೆಸಿದ ಗುಂಡಿನ ದಾಳಿ ಮಾನವೀಯತೆಗೆ ಕಳಂಕ ತಂದ ಘಟನೆ. ಉದ್ಯಾನವನದ ಏಕೈಕ ದ್ವಾರವನ್ನು ಬಂದ್ ಮಾಡಿ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೆ ಗುಂಡಿಕ್ಕಿದ ಈ ಕ್ರೂರಕೃತ್ಯ ಇಡೀ ಜಗತ್ತೇ ತಲೆತಗ್ಗಿಸುವಂತದ್ದು” ಎಂದು ವಿಷಾದ ವ್ಯಕ್ತಪಡಿಸಿದರು.
“ಅಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರ ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಈ ಇತಿಹಾಸವನ್ನು ಇಂದಿನ ಪೀಳಿಗೆ ತಿಳಿದುಕೊಳ್ಳುವುದು ಅತ್ಯಗತ್ಯ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಸಿ.ಜಿ. ಸೊನ್ನದ್ ಮಾತನಾಡಿ, “ಡಿಜಿಟಲ್ ಯುಗದಲ್ಲಿ ಮಕ್ಕಳು ಇತಿಹಾಸದಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ದೇಶಾಭಿಮಾನ ಬೆಳೆಸಲು ಸಹಾಯಕವಾಗುತ್ತವೆ” ಎಂದು ಅಭಿಪ್ರಾಯಪಟ್ಟರು.
ಮಾಜಿ ಸೈನಿಕ ಸಂಘದ ನಿರ್ದೇಶಕ ಕೆ.ಎಸ್. ಹಿರೇಮಠ ಅವರು, ಬಾಲ್ಯದಿಂದಲೇ ಶಿಸ್ತು ಮತ್ತು ದೇಶಪ್ರೇಮದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕೆಂದು ತಿಳಿಸಿದರು.
ಗಣ್ಯರಾದ ವಿಜಯಲಕ್ಷ್ಮಿ ಅಸೂಟಿ ಅವರು ಮಾತನಾಡಿ, “ಈ ಶಿಬಿರದ ಮೂಲಕ ಮಕ್ಕಳಿಗೆ ಕೌಶಲ್ಯಗಳ ಜೊತೆಗೆ ದೇಶದ ಸಂಸ್ಕೃತಿ ಹಾಗೂ ಬಲಿದಾನದ ಮಹತ್ವವನ್ನು ಪರಿಚಯಿಸಲಾಗುತ್ತಿದೆ” ಎಂದರು. ಜ್ಯೋತಿ ದೇಸಾಯಿಗೌಡ ಅವರು, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಯೋಧರ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ವಿಶೇಷವಾಗಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡನಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಶಿಬಿರದ ಮಕ್ಕಳು ಹಾಗೂ ಗಣ್ಯರು ಮೇಣದಬತ್ತಿಗಳನ್ನು ಬೆಳಗಿಸಿ, ಎರಡು ನಿಮಿಷಗಳ ಮೌನಾಚರಣೆ ನಡೆಸಿದರು. ಮಕ್ಕಳ ಕೈಯಲ್ಲಿ ಹೊಳೆಯುತ್ತಿದ್ದ ಮೇಣದಬತ್ತಿಗಳು ಹುತಾತ್ಮರ ಆತ್ಮಕ್ಕೆ ಶಾಂತಿ ಕೋರುವ ಭಾವಪೂರ್ಣ ಸಂಕೇತವಾಗಿದ್ದವು.
ಸಂಸ್ಥೆಯ ಪದಾಧಿಕಾರಿಗಳು, ಶಿಬಿರದ ಮಕ್ಕಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕರಾಳ ಇತಿಹಾಸವನ್ನು ಸ್ಮರಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP