

ಕೊಪ್ಪಳ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಐತಿಹಾಸಿಕ ಶ್ರೀ ಅಂದಿಗಾಲೀಶ ಗುಡ್ಡಕ್ಕೆ ತೆರಳಲು ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ಸೇತುವೆ ನಿರ್ಮಿಸಿಕೊಡಬೇಕೆಂದು ಶ್ರೀ ಅಂದಿಗಾಲೀಶ ಸ್ವಾಮಿಯ ಭಕ್ತರು ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರಾದ ಕೆ.ರಾಜಶೇಖರ ಹಿಟ್ನಾಳ ಅವರಿಗೆ ಮನವಿ ಮಾಡಿದ್ದಾರೆ.
ಸಂಸದರ ಗೃಹ ಕಚೇರಿಯಲ್ಲಿ ಇಂದು ಭೇಟಿ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಯುವಕ ಸಂಘದ ಅಧ್ಯಕ್ಷ ಹುಲ್ಲೇಶ್ ಸಿಂದೋಗಿ ನೇತೃತ್ವದ ಅಂದಿಗಾಲೀಶ ಭಕ್ತರು, ಅಗಳಕೇರಿ ಗ್ರಾಮದ ಬಳಿ ಇರುವ ಐತಿಹಾಸಿಕ ಶ್ರೀ ಅಂದಿಗಾಲೀಶ ಗುಡ್ಡದ ತುಂಗಭದ್ರಾ ಎಡದಂತೆ ನಾಲೆಗೆ ಸೇತುವೆ ನಿರ್ಮಾಣ ಮಾಡಿದಲ್ಲಿ ಇನ್ನಷ್ಟು ಭಕ್ತರ ಸಂಖ್ಯೆ ಹೆಚ್ಚಲಿದೆ.
ಕಳೆದ ಹಲವು ವರ್ಷಗಳಿಂದ ಹಿಟ್ನಾಳ ಕುಟುಂಬ ರಾಜಕೀಯವಾಗಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಮತ್ತು ಸಾಮಾಜಿಕವಾಗಿ ಉತ್ತರೋತ್ತರವಾಗಿ ಹೆಚ್ಚಿನ ವಿಶ್ವಾನಕ್ಕೆ ಪಾತ್ರರಾಗುತ್ತಿರುವುದು ನಮಗೆಲ್ಲ ಹೆಮ್ಮೆ ಪಡುವ ವಿಷಯ.
ಜನರ ಪ್ರೀತಿ ಮತ್ತು ದೇವರ ಅನುಗ್ರಹ ಇದೇರೀತಿ ಇರಲಿ ಎಂದು ಆಶಿಸುತ್ತಾ, ಐತಿಹಾಸಿಕ ಪ್ರಸಿದ್ದಿ ಪಡೆದ ಅಗಳಕೇರಿ ಶ್ರೀ ಅಂದಿಗಾಲೀಶ ಗುಡ್ಡದಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ವಿನಂತಿಸುತ್ತಿದ್ದಾರೆ.
ಗುಡ್ಡಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ತುಂಗಭದ್ರಾ ಎಡದಂತೆ ನಾಲೆಗೆ ಕಬ್ಬಿಣದ ಸಣ್ಣ ಸೇತುವೆ ಇದ್ದು, ಈ ಸೇತುವೆ ಕೂಡ ದುಃಸ್ಥಿತಿಯಲ್ಲಿದೆ. ಇದನ್ನು ತೆರವುಗೊಳಿಸಿ ಸಿಮೆಂಟ್ ಕಾಂಕ್ರೀಟಿನ ವಿಶಾಲವಾದ ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು.
ಪ್ರತಿ ಶನಿವಾರ ಮತ್ತು ಅಮಾವಾಸ್ಯೆಯ ದಿನ ಭಕ್ತರು ಶ್ರೀ ಅಂದಿಗಾಲೀಶ ಗುಡ್ಡಕ್ಕೆ ಬರುತ್ತಾರೆ. ಪ್ರತಿ ಅಮಾವಾಸ್ಯೆ ದಿನ 'ಇಲ್ಲಿ ಅನ್ನದಾಸೋಹ ಇರುತ್ತದೆ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆಯ ಶನಿವಾರದಂದು ಶ್ರೀ ಅಂದಿಗಾಲೀಶ ಸ್ವಾಮಿಯ ಅದ್ದೂರಿ ಜಾತ್ರಾ ಮಹೋತ್ಸವ ಜರುಗುತ್ತದೆ. ಈ ವೇಳೆ ಅಗಳಕೇರಿಯಿಂದ ಪಲ್ಲಕ್ಕಿ ಹೊತ್ತು ಭಕ್ತರು ಮೆರವಣಿಗೆ ಮೂಲಕ ಗುಡ್ಡಕ್ಕೆ ಬರುತ್ತಾರೆ. ಅಂದು ಇಡೀ ದಿನ ನಾಡಿನ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಗುಡ್ಡಕ್ಕೆ ಬರುತ್ತಾರೆ. ಭಕ್ತರ ಅನುಕೂಲಕ್ಕಾಗಿ ಸೇತುವೆ ನಿರ್ಮಾಣದ ಅಗತ್ಯತೆ ಮತ್ತು ಗುಡ್ಡದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಕೋರಿದರು.
ಅನತಿ ದೂರದಲ್ಲಿ ಪುರಾಣಪ್ರಸಿದ್ದ ಅಂಜನಾದ್ರಿ ಪರ್ವತಕ್ಕೆ ತೆರಳಲು ಭಕ್ತರು ಅಗಳಕೇರಿ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶ್ರೀ ಅಂದಿಗಾಲೀಶ ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಅಂಜನಾದ್ರಿಯಂತೆಯೇ ಅಂದಿಗಾಲೀಶ ಗುಡ್ಡ ಕೂಡ ಪ್ರಕೃತಿ ಸಂಪತ್ತು ಮತ್ತು ರಮಣೀಯ ದೃಶ್ಯಗಳಿಂದ ಕೂಡಿದೆ. ಗುಡ್ಡದಲ್ಲಿ ಬೃಹತ್ ನಾಗರ ಹೆಡೆ, ಆಳೆತ್ತರದ ಹುತ್ತ, ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಕಲ್ಲುಬಂಡೆಗಳು, ಉದರ ಶೂಲೆ ನಿವಾರಿಸುವ ಪವಿತ್ರ ಗಂಗೆಯನ್ನು ವರ್ಷಪೂರ್ತಿ ಹೊಂದಿರುವ ಕೋತಿ ಗುಂಡು, ಯೋನಿ ಕುಂಡಗಳು ಧಾರ್ಮಿಕ ಮಹತ್ವವನ್ನು ಪಡೆದಿವೆ. ಪ್ರಕೃತಿ ಸಂಪತ್ತಿನಿಂದ ಕೂಡಿದ ಈ ಪ್ರದೇಶವನ್ನು 'ಪ್ರವಾಸಿ ತಾಣ ಮತ್ತು ಧಾರ್ಮಿಕ ತಾಣವನ್ನಾಗಿಸುವುದು ಅಗತ್ಯವಿದೆ.
ಈ ಕಾರಣದಿಂದಾಗಿ ದೂರದ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು, ಪ್ರವಾಸಿಗರು ಶ್ರೀ ಅಂದಿಗಾಲೀಶ ಗುಡ್ಡ ಹತ್ತುವ ಬಯಕೆ ಹೊಂದಿದ್ದಾರೆ. ಕಾರಣ ತುಂಗಭದ್ರಾ ಎಡದಂತೆ ನಾಲೆಗೆ ಸೇತುವೆ ಇರದೇ ಇರುವುದರಿಂದ ನಿರಾಸೆಯಿಂದ ವಾಪಸ್ಸು ಹೋಗುತ್ತಿದ್ದಾರೆ. ಆದ್ದರಿಂದ ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಭಕ್ತರಿಗೆ ಮತ್ತು ಪ್ರವಾಸಿಗರಿಗಾಗಿ ಸೇತುವೆ ನಿರ್ಮಾಣ, ಸಮುದಾಯ ಭವನ, ಕೊಠಡಿಗಳ ನಿರ್ಮಾಣ, ಕುಡಿಯುವ ನೀರು, ಪಾಕಶಾಲೆ, ಗೋಶಾಲೆ, ಉದ್ಯಾನವನ ನಿರ್ಮಾಣದ ಜೊತೆಗೆ ಪ್ರವಾಸಿ ತಾಣವಾಗಿಸುವ ದಿಸೆಯಲ್ಲಿ ಯೋಜನೆ ರೂಪಿಸಿ, ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಅಂದಿಗಾಲೀಶ ಸ್ವಾಮಿಯ ಭಕ್ತರಾದ ರಾಮಾಲೆಪ್ಪ ರಾಮಣ್ಣ ಕುರಿ, ಮರಿಯಜ್ಜ ಭೀಮಪ್ಪ ಮಡಿವಾಳರ, ಹುಲ್ಲೇಶ್ ಮಲ್ಲಪ್ಪ ಕುರಿ, ನಿಂಗಜ್ಜ ಚೌಧರಿ, ಹಾಲಪ್ಪ ತೋಟದ, ಶರಣಪ್ಪ ಕುಟುಗನಹಳ್ಳಿ, ಕರಿಯಪ್ಪ ಕುರಿ, ಮಲ್ಲೇಶಪ್ಪ ಗಡಾದ, ರಂಗಪ್ಪ ಕುರಿ ಇನ್ನಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್