
ಬೆಂಗಳೂರು, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾನವೀಯ ನೆರವು ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ತೆರಳುತ್ತಿದ್ದ ವೇಳೆ, ಆಟೋ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತವನ್ನು ಗಮನಿಸಿದ ಸಚಿವರು ತಕ್ಷಣ ವಾಹನ ನಿಲ್ಲಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಅಪಘಾತದಲ್ಲಿ ವಿಕ್ರಂ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸುಮಾರು ಅರ್ಧ ಗಂಟೆಯ ಕಾಲ ರಸ್ತೆಯಲ್ಲೇ ಬಿದ್ದಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣ ಕುಮಾರಸ್ವಾಮಿ ಅವರು ಗಾಯಾಳುವನ್ನು ಪೊಲೀಸ್ ವಾಹನದ ಮೂಲಕ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಿದರು. ಜೊತೆಗೆ, ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಗಾಯಾಳುವಿಗೆ ತುರ್ತು ಹಾಗೂ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಸಚಿವರ ಈ ಸಮಯೋಚಿತ ಹಾಗೂ ಮಾನವೀಯ ಸ್ಪಂದನೆಗೆ ಸ್ಥಳೀಯರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa