
ಬೆಂಗಳೂರು, 12 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದ ಗಣಿ ಸಂಪತ್ತನ್ನು ಕೇರಳಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆ ರಾಜಕೀಯ ಕಾವು ಹೆಚ್ಚಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಗಡಿಭಾಗದಲ್ಲಿ ಎಂ-ಸ್ಯಾಂಡ್, ಜಲ್ಲಿ ಸೇರಿದಂತೆ ಅಮೂಲ್ಯ ಖನಿಜ ಸಂಪತ್ತು ಪ್ರತಿದಿನ ನೂರಾರು ಟಿಪ್ಪರ್ಗಳ ಮೂಲಕ ಕಳ್ಳಸಾಗಣೆಯಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಟೀಕಿಸಿರುವ ಅವರು, ಬಂಡೀಪುರದ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದ್ದಾರೆ. ಅಲ್ಲದೆ, ಕೆಲವು ಅಧಿಕಾರಿಗಳು ಪ್ರತಿ ಲಾರಿಗೆ ಹಣ ವಸೂಲಿ ಮಾಡಿಕೊಂಡು ಅಕ್ರಮ ಸಾಗಣೆಗೆ ಸಹಕಾರ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮುಂದಿಟ್ಟಿದ್ದಾರೆ.
ಇದಲ್ಲದೆ, ಆರ್ಟಿಒ ಮತ್ತು ಪೊಲೀಸ್ ಇಲಾಖೆಗಳ ಸಹಕಾರವಿಲ್ಲದೆ ಇಂತಹ ದೊಡ್ಡ ಮಟ್ಟದ ಅಕ್ರಮ ಸಾಧ್ಯವೇ ಎಂಬ ಪ್ರಶ್ನೆಯನ್ನು ಎತ್ತಿರುವ ಅವರು, ಪ್ರಕರಣದ ಹಿಂದೆ ಪ್ರಭಾವಿ ರಾಜಕೀಯ ನಾಯಕರ ಪಾತ್ರವಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿ, ಕೆ. ಸಿ.ವೇಣುಗೋಪಾಲ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರುಗಳನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ.
ರಾಜ್ಯದ ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದ್ದು, ತಕ್ಷಣವೇ ಅಕ್ರಮ ಸಾಗಣೆಯನ್ನು ನಿಲ್ಲಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa