ಕರ್ನಾಟಕ ಪ್ರಾಂತ ರೈತ ಸಂಘದ ೯೦ ನೆಯ ವರ್ಷದ ಸಂಸ್ಥಾಪನಾ ದಿನಾಚರಣೆ
ಕರ್ನಾಟಕ ಪ್ರಾಂತ ರೈತ ಸಂಘದ ೯೦ ನೆಯ ವರ್ಷದ ಸಂಸ್ಥಾಪನಾ ದಿನಾಚರಣೆ
ಕೋಲಾರದಲ್ಲಿ ಪ್ರಾಂತ ರೈತ ಸಂಘದ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.


ಕೋಲಾರ, ೧೧ ಏಪ್ರಿಲ್ (ಹಿ.ಸ) :

ಆ್ಯಂಕರ್ : ದೇಶದಲ್ಲಿ ಕೆಲವೇ ಕೆಲವು ಶ್ರೀಮಂತರ ಆದಾಯ ಮತ್ತು ಆಸ್ತಿ ಎಲ್ಲೆ ಮೀರಿ ಬೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸದಿದ್ದರೆ, ಬಿಕ್ಕಟ್ಟಿನಲ್ಲಿರುವ ಕೃಷಿಯನ್ನಾಗಲಿ ಅಥವಾ ಸಂಕಷ್ಟದಲ್ಲಿರುವ ರೈತ ಸಮುದಾಯವನ್ನಾಗಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲೆ ಘಟಕದ ಅಧ್ಯಕ್ಷ ನುಕ್ಕನಹಳ್ಳಿ ಶ್ರೀರಾಮ್ ತಿಳಿಸಿದರು.

ನಗರದ ಪಾಲಸಂದ್ರ ಲೇಔಟ್ ನಲ್ಲಿ ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಸಂಘಟನೆಯ ೯೦ ನೆಯ ವರ್ಷದ ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ, ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಿದ್ದುಪಡಿ ಮಾಡುವ ಮೂಲಕ ರೈತರ ಮತ್ತು ಕೂಲಿಕಾರರ ಆದಾಯವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಲಾಗಿದೆ’ ಎಂದು ಹೇಳಿದರು.

ಒಂದು ಕಡೆ ಸರ್ಕಾರಿ ಮತ್ತು ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ನೀಡದೇ, ಮತ್ತೊಂದೆಡೆ ಫಲವತ್ತಾದ ಕೃಷಿಯೋಗ್ಯ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕೃಷಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತಾಪಿ ವರ್ಗ ಸಂಪೂರ್ಣ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ರೈತರು ಜಾಗೃತರಾಗದಂತೆ ಅವರ ಮೇಲೆ ಜಾತಿ, ಧರ್ಮ ಮತ್ತು ದೇವರು, ಪಾಪ, ಪುಣ್ಯದಂತಹ ಮೌಢ್ಯದ ವಿಚಾರಗಳನ್ನು ತುಂಬಿ ದಾರಿ ತಪ್ಪಿಸಲಾಗುತ್ತಿದೆ. ಅವರ ನಡುವಿನ ಏಕತೆಯನ್ನು ವ್ಯವಸ್ಥಿತವಾಗಿ ಒಡೆಯು ಮೂಲಕ ಆಳುವ ವರ್ಗ ಲಾಭ ಮಾಡಿಕೊಳ್ಳುತ್ತಿದೆ. ರೈತರು ಮತ್ತು ಕೃಷಿ ಉಳಿಸಲು ಎರಲ್ಲ ದುಡಿಯುವ ಜನ ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.

ಜಿಲ್ಲೆಯ ಅರಣ್ಯ ಭೂಮಿ ಹೆಸರಿನಲ್ಲಿ ಅಧಿಕಾರಿಗಳು ಪೋಲಿಸರ ದೌರ್ಜನ್ಯಗಳು ಸೇರಿದಂತೆ ರೈತರ ಹಲವು ಪ್ರಶ್ನೆಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಹೋರಾಟ ಮಾಡುತ್ತಿದೆ. ಅದೇ ಸಂದರ್ಭದಲ್ಲಿ ನಮ್ಮ ಕೂಗು ಇನ್ನೂ ಪ್ರಬಲವಾಗಿ ಆಳುವವರಿಗೆ ಕೇಳಿಸುವಂತಾಗಬೇಕು. ಆಗ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಗಂಗಮ್ಮ ಸಹ ಕಾರ್ಯದರ್ಶಿ ಸುಗಟೂರು ಶ್ರೀಧರ್, ತಾಲೂಕು ಅಧ್ಯಕ್ಷ ಹೊಲ್ಲಂಬಳ್ಳಿ ವೆಂಕ, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಸದಸ್ಯರಾದ ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande