
ಕೋಲಾರ, ೧೧ ಏಪ್ರಿಲ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಬಂಗಾರಪೇಟೆ ನಗರದ ಶ್ರೀಮತಿ ದಾನಮ್ಮ ಚನ್ನಬಸವಯ್ಯ ಎಸ್ಡಿಸಿ ಕಾಲೇಜಿನ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾದಕ ದ್ರವ್ಯಗಳು ಹಾಗೂ ನಶಾ ವಸ್ತುಗಳ ವಿರುದ್ಧ ಜಾಗೃತಿ ಜಾಥಾ ನಡೆಸಿದ್ದು, ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಜಪೂತ್ ಚಾಲನೆ ನೀಡಿದರು.
ಎಸ್ಡಿಸಿ ಕಾಲೇಜಿನ ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್ಪಿ ಶಿವಾಂಶುರಜಪೂತ್, ವೃತ್ತನಿರೀಕ್ಷ ರವಿಕುಮಾರ್ ಮಾರ್ಗದರ್ಶನದಲ್ಲಿ ಈ ಜಾಥಾ ನಡೆಸಿದ್ದು, ಮಾದಕದ್ರವ್ಯಗಳ ವಿರುದ್ದ ಘೋಷಣೆ ಕೂಗುತ್ತಾ ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ಸಂಚರಿಸಿ ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಮಾದಕ ವಸ್ತು ಗಳನ್ನು ಸೇವಿಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.
ಜಾಥಾಗೆ ಚಾಲನೆ ನೀಡಿದ ಎಸ್ಪಿ ಶಿವಾಂಶುರಜಪೂತ್ ಮಾತನಾಡಿ, ವಿದ್ಯಾರ್ಥಿಗಳು ನಶೆ ಯುಕ್ತ ಮತ್ತು ಮಾದಕ ದ್ರವ್ಯಗಳಿಂದ ದೂರವಿರುವಂತೆ ಮನವಿ ಮಾಡಿದ ಅವರು, ಯಾರಾದರೂ ಇಂತಹ ವಸ್ತುಗಳನ್ನು ಸೇವಿಸಲು ಬಲವಂತ ಮಾಡಿದಲ್ಲಿ ಅಥವಾ ಸರಬರಾಜು ಮಾಡಿದಲ್ಲಿ ಅಂಥವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿ, ಅಂತಹ ಸುಳಿವು ಸಿಕ್ಕರೆ ಕೂಡಲೇ ಪೊಲಿಸರಿಗೆ ಮಾಹಿತಿ ನೀಡಿ ಎಂದರು.
ಮಾದಕ ವಸ್ತು,ತಂಬಾಕು ಸೇವನೆ ನಿಮ್ಮ ಅಮೂಲ್ಯವಾದ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಚಾಕೋಲೆಟ್ ಮತ್ತಿತರ ತಿನಿಸುಗಳಲ್ಲೂ ಮಾದಕ ವಸ್ತು ತುಂಬಿ ಮಾರುತ್ತಿರುವ ಘಟನೆಗಳು ನಡೆದಿವೆ. ಒಟ್ಟಾರೆ ವಿದ್ಯಾರ್ಥಿಗಳು ಇಂತಹ ಕೃತ್ಯಗಳ ಕುರಿತು ಎಚ್ಚರಿಕೆ ವಹಿಸಬೇಕು. ವೃತ್ತ ನಿರೀಕ್ಷಕ ರವಿಕುಮಾರ್ ಮಾತನಾಡಿ, ಮಾದಕವಸ್ತುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಜಾಲವನ್ನು ಅನೇಕ ಬಾರಿ ಪೊಲೀಸರು ಭೇದಿಸಿ ಜೈಲಿಗಟ್ಟಿದ್ದಾರೆ, ಇಂತಹ ದುಷ್ಟರನ್ನು ಬಲಿ ಹಾಕಲು ನಿಮ್ಮ ಸಹಕಾರ ಅಗತ್ಯವಿದೆ, ಅಂತಹ ಮಾರಾಟ ಕಂಡು ಬಂದರೆ ಕೂಡಲೇ ನಮ್ಮ ಗಮನಕ್ಕೆ ತನ್ನಿ, ನಿಮ್ಮ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಎಸ್.ಡಿ.ಸಿ ಕಾಲೇಜಿನ ಕಾರ್ಯದರ್ಶಿ ಉಷಾ ಗಂಗಾಧರ ಮಾತನಾಡಿ, ಜೀವನವು ತುಂಬಾ ಅಮೂಲ್ಯವಾದದ್ದು, ಅದನ್ನು ದೇಶದ ಅಭಿವೃದ್ಧಿಗೆ ಬಳಸಬೇಕು. ಮಾದಕ ವ್ಯಸನದಿಂದ ದೂರವಿರಬೇಕು. ಮಾದಕ ವಸ್ತುಗಳು ಆರೋಗ್ಯವನ್ನು ಹಾಳುಮಾಡುವುದಲ್ಲದೆ, ಸಮಾಜದಲ್ಲಿ ಮಕ್ಕಳ ಕುಟುಂಬದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳು ನಿಮ್ಮ ಪೋಷಕರ ಆಶಯ ಈಡೇರಿಸುವ ಸಂಕಲ್ಪ ಮಾಡಿ, ನಿಮ್ಮ ಗುರಿ ಓದಿನತ್ತ ಇರಲಿ, ನೀವು ಸಾಧಕರಾಗಿ ಹೊರಹೊಮ್ಮಿದರೆ ಮಾತ್ರ ನಿಮ್ಮ ಬದುಕು ಹಸನಾಗುತ್ತದೆ ಎಂದ ಅವರು, ಕ್ಷಣ ಮಾತ್ರದ ಸುಖಗಳಿಗಾಗಿ ಮಾದಕ ವಸ್ತುಗಳಿಗೆ ಬಲಿಯಾಗಿ ನಿಮ್ಮ ಅಮೂಲ್ಯವಾದ ಇಡೀ ೧೦೦ ವರ್ಷದ ಜೀವನ ಹಾಳು ಮಾಡಿಕೊಳ್ಳದಿರಿ ಎಂದರು.
ಈ ಜಾಥಾವನ್ನು ಎಸ್.ಡಿ.ಸಿ ಕಾಲೇಜಿನ ನಶೆ ಮುಕ್ತ ಸಮಿತಿ ಆಯೋಜಿಸಿದ್ದು, ಜಾಥಾದಲ್ಲಿ, ಪ್ರಾಂಶುಪಾಲ ಡಾ||ಎಸ್.ಎ. ಜಗದೀಶ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪನ್ಯಾಸಕರು, ಪೊಲೀಸ್ ಉಪನಿರೀಕ್ಷಕ ರಾಜಣ್ಣ, ಉಪನ್ಯಾಸಕ ಪವನ್ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್