
ಬೀದರ್, 11 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬೀದರ್ ನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವ ಈಶ್ವರ ಖಂಡ್ರೆ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬೀದರ್–ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ಜಿಲ್ಲೆಯ ಜನತೆಯ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಹಾಗೂ ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡುತ್ತಿರುವ ಬೆಂಬಲ ಶ್ಲಾಘನೀಯವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ದೊರೆತಿದೆ ಎಂದು ತಿಳಿಸಿದರು. ಇದರಿಂದ ನೀರಾವರಿ, ಮೂಲಸೌಕರ್ಯ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಚೈತನ್ಯ ಸಿಕ್ಕಿದೆ ಎಂದು ಹೇಳಿದರು.
ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ನೀಡಿರುವ ಸಹಕಾರವನ್ನು ಮೆಚ್ಚಿದ ಅವರು, ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಂಡು ಜಗತ್ತಿನ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಸತ್ಯನಿಷ್ಠೆ ಹಾಗೂ ಸ್ವಯಂ ನಿಯಂತ್ರಣ ಅಗತ್ಯವೆಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಸಚಿವ ರಹೀಂ ಖಾನ್, ಡಾ. ಶರಣ ಪ್ರಕಾಶ್ ಪಾಟೀಲ್, ಸಂಸದ ಸಾಗರ್ ಈ ಖಂಡ್ರೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ್ ದೇವಪ್ಪ ಹಾರಕುಡ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa