ಕೇಂದ್ರದಿಂದ ನ್ಯಾಯಯುತ ತೆರಿಗೆ ಹಂಚಿಕೆಗೆ ಸಿದ್ದರಾಮಯ್ಯ ಒತ್ತಾಯ
ಜಿ.ಎಸ್.ಟಿ ದರ ಪರಿಷ್ಕರಣೆ ಪರಿಣಾಮ ರಾಜ್ಯದ ರಾಜಸ್ವಕ್ಕೆ ಹೊಡೆತ
Cm


ಬೆಂಗಳೂರು, 06 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕವು ಸದೃಢ ವಿತ್ತೀಯ ನಿರ್ವಹಣೆ ಹಾಗೂ ಪರಿಣಾಮಕಾರಿ ಸಂಪನ್ಮೂಲ ಕ್ರೋಢೀಕರಣದ ಮೂಲಕ ಆರ್ಥಿಕವಾಗಿ ಮುಂದುವರಿಯುತ್ತಿದೆಯಾದರೂ, ಕೇಂದ್ರ ಸರ್ಕಾರದ ತೆರಿಗೆ ನೀತಿಗಳ ಬದಲಾವಣೆಗಳಿಂದ ರಾಜ್ಯದ ರಾಜಸ್ವ ಸಂಗ್ರಹಣೆಗೆ ಸವಾಲುಗಳು ಎದುರಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ 2026–27ನೇ ಸಾಲಿನ ಬಜೆಟ್ ಮಂಡನೆ ವೇಳೆ ಅವರು ಮಾತನಾಡಿ, ಈ ಸವಾಲುಗಳ ನಡುವೆಯೂ ಸರ್ಕಾರ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದ ರಾಜ್ಯದ ಸ್ವಂತ ರಾಜಸ್ವ ಸಂಗ್ರಹಣೆಯಲ್ಲಿ ಸ್ಥಿರತೆ ಸಾಧಿಸಲಾಗಿದೆ ಎಂದು ಹೇಳಿದರು. 2024–25ರ ರಾಜಸ್ವ ಸಂಗ್ರಹಣೆಗೆ ಹೋಲಿಸಿದರೆ 2025–26ರ ಪರಿಷ್ಕೃತ ಅಂದಾಜುಗಳಲ್ಲಿ ರಾಜ್ಯದ ಸ್ವಂತ ರಾಜಸ್ವವು ಶೇ.8.3ರಷ್ಟು ಹೆಚ್ಚಳ ಕಂಡಿದೆ ಎಂದು ಅವರು ವಿವರಿಸಿದರು.

ರಾಜ್ಯದ ತೆರಿಗೆ ಆದಾಯದಲ್ಲಿ ಜಿ.ಎಸ್.ಟಿ ಪ್ರಮುಖ ಪಾಲು ಹೊಂದಿದ್ದು, ಸ್ವಂತ ತೆರಿಗೆ ರಾಜಸ್ವದಲ್ಲಿ ಶೇ.43ರಷ್ಟು ಪಾಲು ಜಿ.ಎಸ್.ಟಿ ಮೂಲಕವೇ ಬರುತ್ತದೆ. ಜಿ.ಎಸ್.ಟಿ ಸಂಗ್ರಹಣೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ಆದರೆ ಆರ್ಥಿಕ ವರ್ಷದ ಮಧ್ಯದಲ್ಲಿ ಕೇಂದ್ರ ಸರ್ಕಾರ ಜಿ.ಎಸ್.ಟಿ ದರಗಳನ್ನು ತರ್ಕಬದ್ಧಗೊಳಿಸಿರುವ ಪರಿಣಾಮ ರಾಜ್ಯದ ರಾಜಸ್ವ ಸಂಗ್ರಹಣೆಗೆ ಹೊಡೆತ ಬಿದ್ದಿದೆ ಎಂದು ಸಿಎಂ ಹೇಳಿದರು. ದರ ಪರಿಷ್ಕರಣೆಗೆ ಮುನ್ನ ರಾಜ್ಯದ ಮಾಸಿಕ ಜಿ.ಎಸ್.ಟಿ ಸಂಗ್ರಹಣೆ ಸರಾಸರಿ ಶೇ.10ರಷ್ಟು ಬೆಳವಣಿಗೆ ದಾಖಲಿಸುತ್ತಿತ್ತು. ಆದರೆ ದರ ಪರಿಷ್ಕರಣೆಯ ನಂತರ ಈ ಬೆಳವಣಿಗೆ ಶೇ.4ಕ್ಕೆ ಕುಸಿದಿದೆ. ಇದರ ಪರಿಣಾಮವಾಗಿ 2025–26ನೇ ಸಾಲಿನಲ್ಲಿ ರಾಜ್ಯಕ್ಕೆ ಅಂದಾಜು 10 ಸಾವಿರ ಕೋಟಿ ರೂಪಾಯಿ ರಾಜಸ್ವ ಕೊರತೆ ಉಂಟಾಗಿದೆ. ಮುಂದಿನ ಸಾಲಿನಲ್ಲಿ ಈ ಕೊರತೆ ಸುಮಾರು 15 ಸಾವಿರ ಕೋಟಿ ರೂಪಾಯಿಗೆ ಏರಬಹುದೆಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಮಟ್ಟದಲ್ಲಿಯೂ ಜಿ.ಎಸ್.ಟಿ ಸಂಗ್ರಹಣೆ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಪ್ರಸಕ್ತ ಸಾಲಿನಲ್ಲಿ ದೇಶದ ಮಟ್ಟದಲ್ಲಿ ಸುಮಾರು 1.3 ಲಕ್ಷ ಕೋಟಿ ರೂಪಾಯಿ ಹಾಗೂ ಮುಂದಿನ ವರ್ಷದಲ್ಲಿ ಸುಮಾರು 2 ಲಕ್ಷ ಕೋಟಿ ರೂಪಾಯಿ ರಾಜಸ್ವ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ರಾಜ್ಯಗಳಿಗೆ ಕೇಂದ್ರದಿಂದ ದೊರೆಯುವ ತೆರಿಗೆ ಹಂಚಿಕೆಯೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಜಿ.ಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯಿಂದ ರಾಜ್ಯಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಪರಿಹರಿಸಬೇಕು ಎಂಬ ಉದ್ದೇಶದಿಂದ ಕರ್ನಾಟಕವು ಇನ್ನೂ ಏಳು ರಾಜ್ಯಗಳೊಂದಿಗೆ ಸೇರಿ ಜಿ.ಎಸ್.ಟಿ ಮಂಡಳಿಗೆ ಜಂಟಿ ಜ್ಞಾಪಕ ಪತ್ರ ಸಲ್ಲಿಸಿದೆ. ದರ ಪರಿಷ್ಕರಣೆಯ ಪರಿಣಾಮವಾಗಿ ರಾಜ್ಯಗಳ ರಾಜಸ್ವಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಒತ್ತಾಯ ಮುಂದುವರಿಸುತ್ತದೆ ಎಂದು ಸಿಎಂ ಹೇಳಿದರು.

ಇದೇ ವೇಳೆ ಹಣಕಾಸು ಆಯೋಗಗಳ ಶಿಫಾರಸುಗಳ ಬಗ್ಗೆ ಮಾತನಾಡಿದ ಅವರು, ೧೪ನೇ ಹಣಕಾಸು ಆಯೋಗದ

ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು ಶೇ.4.713 ಆಗಿದ್ದರೆ, ೧೫ನೇ ಹಣಕಾಸು ಆಯೋಗದ ಅವಧಿಯಲ್ಲಿ ಅದು ಶೇ.3.647ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು. ಇದರಿಂದ ಆರು ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು 65 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ವಿವರಿಸಿದರು.

ಆದರೆ ೧೬ನೇ ಹಣಕಾಸು ಆಯೋಗದ ವರದಿಯಲ್ಲಿ ಕರ್ನಾಟಕಕ್ಕೆ ಶೇ.4.131ರಷ್ಟು ತೆರಿಗೆ ಪಾಲು ಶಿಫಾರಸು ಮಾಡಿರುವುದು ಸ್ವಲ್ಪ ಮಟ್ಟಿಗೆ ನ್ಯಾಯ ಒದಗಿಸಿದೆ ಎಂದು ಅವರು ಹೇಳಿದರು.

ರಾಜಸ್ವ ಸಂಗ್ರಹಣೆಯ ಮೇಲಿನ ಒತ್ತಡಗಳ ನಡುವೆಯೂ ಸರ್ಕಾರ ಸಮಾಜ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯವು ವಿತ್ತೀಯ ಶಿಸ್ತು ಕಾಪಾಡಿಕೊಂಡಿದ್ದು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಪ್ರಕಾರ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ ಯ ಶೇ.3ರೊಳಗೆ ಹಾಗೂ ಒಟ್ಟು ಸಾರ್ವಜನಿಕ ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ ಯ ಶೇ.25ರೊಳಗೆ ನಿರ್ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande