ಬೆಂಗಳೂರು ಅಭಿವೃದ್ಧಿಗೆ ಬಜೆಟ್ನಲ್ಲಿ 7,000 ಕೋಟಿ ಅನುದಾನ
ಬೆಂಗಳೂರು, 06 ಮಾರ್ಚ್ (ಹಿ.ಸ.): ಆ್ಯಂಕರ್: ರಾಜಧಾನಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್‌ನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ನಗರದ ನಾಗರಿಕರಿಗೆ ಪಾರದರ್ಶಕ, ಜನಸ್ನೇಹಿ ಮತ್ತು ತುರ್ತು ಸ್ಪಂದನೆಯ ಆಡಳಿತ ಒದಗಿಸುವ
Cm


ಬೆಂಗಳೂರು, 06 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಜಧಾನಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಬಜೆಟ್‌ನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ನಗರದ ನಾಗರಿಕರಿಗೆ ಪಾರದರ್ಶಕ, ಜನಸ್ನೇಹಿ ಮತ್ತು ತುರ್ತು ಸ್ಪಂದನೆಯ ಆಡಳಿತ ಒದಗಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಮಹಾನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ನೀಡುತ್ತಿದ್ದ 3,000 ಕೋಟಿ ರೂ. ಅನುದಾನವನ್ನು 7,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಈ ಅನುದಾನವನ್ನು ಮುಂದುವರೆಸಲಾಗುವುದು ಎಂದು ಘೋಷಿಸಲಾಗಿದೆ.

ನಗರದ ರಸ್ತೆಗಳ ದೀರ್ಘಕಾಲಿಕ ಬಾಳಿಕೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 450 ಕಿ.ಮೀ.ಗೂ ಹೆಚ್ಚು ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿ 3,000 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ಜೊತೆಗೆ 175 ಜಂಕ್ಷನ್‌ಗಳ ಸೌಂದರ್ಯೀಕರಣ, 500 ಕಿ.ಮೀ. ಪಾದಚಾರಿ ಮಾರ್ಗಗಳ ಮೇಲ್ದರ್ಜೆಗೇರಿಕೆ ಮತ್ತು 100 ಸ್ಕೈವಾಕ್‌ಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.

ರಾಜಕಾಲುವೆಗಳ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ವಿಶ್ವಬ್ಯಾಂಕ್ ನೆರವಿನ ಯೋಜನೆಯಡಿ ಸುಮಾರು 2,000 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಐದು ಮಹಾನಗರ ಪಾಲಿಕೆಗಳು ತಮ್ಮ ಬ್ಯಾಲೆನ್ಸ್ ಶೀಟ್ ಆಧಾರದ ಮೇಲೆ ಮುನಿಸಿಪಲ್ ಬಾಂಡ್‌ಗಳನ್ನು ಹೊರಡಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಪನ್ಮೂಲ ಸಂಗ್ರಹಿಸಲಿವೆ.

2027ರೊಳಗೆ ಬೆಂಗಳೂರಿಗೆ ಪರಿಷ್ಕೃತ ಮಾಸ್ಟರ್ ಪ್ಲಾನ್–2041 ಜಾರಿಗೆ ತರಲಾಗಿದ್ದು, ಸಮಗ್ರ ಮೊಬಿಲಿಟಿ ಯೋಜನೆ ಆರು ತಿಂಗಳೊಳಗೆ ಸಿದ್ಧಗೊಳ್ಳಲಿದೆ ಎಂದು ಘೋಷಿಸಲಾಗಿದೆ.

ನಮ್ಮ ಮೆಟ್ರೋ ಈಗಾಗಲೇ 96 ಕಿ.ಮೀ. ಜಾಲವನ್ನು ಹೊಂದಿದ್ದು ಪ್ರತಿದಿನ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. 2026–27ರಲ್ಲಿ ಹೆಚ್ಚುವರಿ 41 ಕಿ.ಮೀ. ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು, ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ನಗರದ ಸುಮಾರು 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನೀರು ಸರಬರಾಜು ಯೋಜನೆಯ 6ನೇ ಹಂತವನ್ನು ಜಪಾನ್‌ನ ಜಪಾನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ ನೆರವಿನಿಂದ 6,939 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ.

ಇದೇ ವೇಳೆ ಸಂಚಾರ ದಟ್ಟಣೆ ಕಡಿಮೆ ಮಾಡಲು ತುಮಕೂರು ರಸ್ತೆ–ಹೊಸೂರು ರಸ್ತೆ ನಡುವೆ 73 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್, ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರಂನಿಂದ ಮೈಸೂರು ರಸ್ತೆವರೆಗೆ 40 ಕಿ.ಮೀ. ಸುರಂಗ ಮಾರ್ಗ ಯೋಜನೆ, ಹಾಗೂ ನೆಲಮಂಗಲ–ತಾವರೆಕೆರೆ–ಬಿಡದಿ ಮಧ್ಯಂತರ ವರ್ತುಲ ರಸ್ತೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande