
ಬೆಂಗಳೂರು, 06 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಿ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸೌರ ವಿದ್ಯುತ್ ಒದಗಿಸುವುದು, ಪ್ರಸರಣ ಜಾಲ ವಿಸ್ತರಣೆ, ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ ಹಾಗೂ ವಿದ್ಯುತ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಎಂಬ ಹೊಸ ಯೋಜನೆಯನ್ನು ಕುಸುಮ-ಸಿ ಮಾದರಿಯಲ್ಲಿ ಜಾರಿಗೆ ತರಲಾಗುತ್ತದೆ. ಈ ಯೋಜನೆಯಡಿ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ನವೀಕರಿಸಬಹುದಾದ ಇಂಧನ ಸೇವಾ ಕಂಪನಿ ಮಾದರಿಯಲ್ಲಿ ಸುಮಾರು 10,500 ಕೋಟಿ ರೂ. ವೆಚ್ಚದಲ್ಲಿ 3,000 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುವುದು.
ಪ್ರಸರಣ ಜಾಲ ವಿಸ್ತರಣೆ
ರಾಜ್ಯದ ವಿದ್ಯುತ್ ಪ್ರಸರಣ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2025–26ನೇ ಸಾಲಿನಲ್ಲಿ 100 ಹೊಸ ಉಪಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯಲ್ಲಿ 2026–27ನೇ ಸಾಲಿನಲ್ಲಿಯೂ ಮತ್ತಷ್ಟು 100 ಉಪಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಸರ್ಕಾರ ಹೊಂದಿದೆ.
ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ
ನವೀಕರಿಸಬಹುದಾದ ಇಂಧನ ಸಮತೋಲನ ಹಾಗೂ ಗರಿಷ್ಠ ವಿದ್ಯುತ್ ಲೋಡ್ ನಿರ್ವಹಣೆಗೆ 2026–27ನೇ ಸಾಲಿನಲ್ಲಿ 1,000 ಮೆಗಾವಾಟ್-ಗಂಟೆ ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ ಅನ್ನು ಏಳು ಉಪಕೇಂದ್ರಗಳಲ್ಲಿ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಮುಂದಿನ ಸಾಲಿನಲ್ಲಿ 2,000 MWh ಸಾಮರ್ಥ್ಯದ ಬಿಈಎಸ್ಎಸ್ ಯೋಜನೆಯನ್ನು ಸುಮಾರು 3,400 ಕೋಟಿ ರೂ. ವೆಚ್ಚದಲ್ಲಿ ಹುಲಿಯೂರು, ಪಾವಗಡ ಮತ್ತು ಕುಷ್ಟಗಿ ಉಪಕೇಂದ್ರಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಇವಿ ಚಾರ್ಜಿಂಗ್ ಕೇಂದ್ರಗಳು
ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಎಸ್ಕಾಂಗಳ ಸಹಯೋಗದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 777 ಕೋಟಿ ರೂ. ವೆಚ್ಚದಲ್ಲಿ 1,250 ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಈ ಕೇಂದ್ರಗಳನ್ನು ಪಿಎಂ ಇ-ಡ್ರೈವ್ ಯೋಜನೆಯಡಿ ಸ್ಥಾಪಿಸಲಾಗುತ್ತದೆ.
ಸ್ಟಾರ್ಟ್‌ಅಪ್‌ಗಳಿಗೆ ಇಂಕ್ಯೂಬೇಶನ್ ಕೇಂದ್ರ
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು, ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ (ಆಸ್ಟ್ರೇಲಿಯಾ) ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅವರ ಸಹಯೋಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಇಂಕ್ಯೂಬೇಶನ್ ಕೇಂದ್ರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಕ್ರಮಗಳ ಮೂಲಕ ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ವಿದ್ಯುತ್ ಕ್ಷೇತ್ರದ ಮೂಲಸೌಕರ್ಯವನ್ನು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa