
ನವದೆಹಲಿ, 04 ಮಾರ್ಚ್ (ಹಿ.ಸ.):
ಆ್ಯಂಕರ್:ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸ್ವಾಗತಿಸಿದರು. ಈ ಭೇಟಿ ಭಾರತ–ಫಿನ್ಲ್ಯಾಂಡ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿ, ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಕಚೇರಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಫಿನ್ಲ್ಯಾಂಡ್ ಅಧ್ಯಕ್ಷರು ಇಂದು ಬೆಳಿಗ್ಗೆ ನವದೆಹಲಿಗೆ ಆಗಮಿಸಿದರು. ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೆ.ವಿ. ಸಿಂಗ್ ವಿಮಾನ ನಿಲ್ದಾಣದಲ್ಲಿ ಔಪಚಾರಿಕವಾಗಿ ಬರಮಾಡಿಕೊಂಡು, ಗೌರವ ರಕ್ಷೆ ನೀಡಲಾಯಿತು.
ಅಧ್ಯಕ್ಷ ಸ್ಟಬ್ ಅವರ ‘ಎಕ್ಸ್’ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಭಾರತಕ್ಕೆ ಸ್ವಾಗತ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್. ನಿಮ್ಮ ಭೇಟಿಯು ಭಾರತ–ಫಿನ್ಲ್ಯಾಂಡ್ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬುದಕ್ಕೆ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾಳೆಯ ನಮ್ಮ ಸಭೆ ಮತ್ತು ರೈಸಿನಾ ಸಂವಾದ 2026 ರಲ್ಲಿ ನಿಮ್ಮ ಮುಖ್ಯ ಭಾಷಣಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಅಲೆಕ್ಸಾಂಡರ್ ಸ್ಟಬ್ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ, “ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದೇನೆ. ಈ ಭೇಟಿ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ–ಫಿನ್ಲ್ಯಾಂಡ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ,” ಎಂದು ಬರೆದಿದ್ದರು.
ಅಧ್ಯಕ್ಷ ಸ್ಟಬ್ ರೈಸಿನಾ ಸಂವಾದ 2026 ರ ಮುಖ್ಯ ಅತಿಥಿ ಮತ್ತು ಪ್ರಮುಖ ಭಾಷಣಕಾರರಾಗಿರಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ನಡೆಯಲಿರುವ ಸಭೆಯಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಣೆ, ವ್ಯಾಪಾರ, ತಂತ್ರಜ್ಞಾನ, ಹವಾಮಾನ ಬದಲಾವಣೆ ಹಾಗೂ ಪ್ರಾದೇಶಿಕ–ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa