ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ : ಸಿ.ಇ.ಒ.
ದಾವಣಗೆರೆ, 31 ಮಾರ್ಚ್ (ಹಿ.ಸ.): ಆ್ಯಂಕರ್:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನಾಳುವ ಸ್ಥಳಿಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಮತದಾರರಿಗೆ ಉತ್ತಮ ಅವಕಾಶವೇ ಮತದಾನ. ಈ ಮತದಾನ ಪ್ರಕ್ರಿಯೆಯಲ್ಲಿ 18ವಯೋಮಾನ ದಾಟಿದ ಎಲ್ಲಾ ಮತದಾರರು ತಮ್ಮ ಅಮೂಲ್ಯ ಮತಚಲಾಯಿಸುವ ಮೂಲಕ ಜನಪ್ರತಿನಿಧಿಯನ್ನು
Awareness camp


ದಾವಣಗೆರೆ, 31 ಮಾರ್ಚ್ (ಹಿ.ಸ.):

ಆ್ಯಂಕರ್:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮನ್ನಾಳುವ ಸ್ಥಳಿಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಮತದಾರರಿಗೆ ಉತ್ತಮ ಅವಕಾಶವೇ ಮತದಾನ. ಈ ಮತದಾನ ಪ್ರಕ್ರಿಯೆಯಲ್ಲಿ 18ವಯೋಮಾನ ದಾಟಿದ ಎಲ್ಲಾ ಮತದಾರರು ತಮ್ಮ ಅಮೂಲ್ಯ ಮತಚಲಾಯಿಸುವ ಮೂಲಕ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌ ಅವರು ಹೇಳಿದರು.

ಅವರು ಇಂದು ಜಿಲ್ಲಾ ಚುನಾವಣಾ ಶಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಇಂದು ನಗರದ ದೇವರಾಜ್ ಅರಸ್ ಬಡಾವಣೆಯ ಶಿವಾಲಿ ಚಿತ್ರಮಂದಿರದಿಂದ ಡಬಲ್ ರೋಡ್ ಮುಖಾಂತರ ಬಡಾವಣೆಯ ಬೀದಿ-ಬೀದಿಗಳಲ್ಲಿ ಮತದಾರರ ಜಾಗೃತಿಗಾಗಿ ಏರ್ಪಡಿಸಲಾಗಿದ್ದ ಬೀದಿನಾಟಕ ಮತ್ತು ಜಾಗೃತಿ ಜಾಥಾ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮತದಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಪವಿತ್ರ ವಾಗಿರುತ್ತದೆ ಇದು ಉತ್ತಮ ನಾಯಕನನ್ನು ಆಯ್ಕೆ ಮಾಡಲು, ಸರ್ಕಾರದ ಮೇಲೆ ಪ್ರಭಾವ ಬೀರಲು ಮತ್ತು ದೇಶದ ನಿರ್ಧಾರ- ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರಮುಖ ಅವಕಾಶವಾಗಿದೆ. ಒಂದು ಮತವು ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದರು.

ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತದಲ್ಲಿ ಮತದಾನವು ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ ಇದರಿಂದಾಗಿ ಪ್ರಜಾಪ್ರಭುತ್ವ ಬಲ ವರ್ಧನೆಗೊಳ್ಳಲಿದೆ ಎಂದ ಅವರು, ನಮ್ಮ ಹಿತಾಸಕ್ತಿಗಳನ್ನು ಕಾಪಾಡುವ, ಸಮರ್ಥ ಮತ್ತು ಪ್ರಾಮಾಣಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇದು ಸಹಕಾರಿಯಾಗಿದೆ ಎಂದರು.

ಚುನಾಯಿತ ಪ್ರತಿನಿಧಿಗಳು ತಮ್ಮ ಕಾರ್ಯಗಳಿಗೆ ಜನರಿಗೆ ಹೊಣೆಗಾರರಾಗಿರಲು ಮತದಾನವು ಒತ್ತಡ ಹೇರುತ್ತದೆ ಅಲ್ಲದೆ ಸಮಾಜದಲ್ಲಿ ಕನಿಷ್ಟ ಜೀವನ ನಡೆಸುತ್ತಿರುವ ವರ್ಗಗಳಿಗೂ ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಮತದಾನದ ಮೂಲಕ ಅವಕಾಶ ಸಿಕ್ಕು ಸಾಮಾಜಿಕ ಬದಲಾವಣೆಗೆ ಅವಕಾಶ ದೊರೆಯಲಿದೆ ಎಂದರು.

ಅಭಿವೃದ್ಧಿ ಪರ ನೀತಿ-ಯೋಜನೆಗಳನ್ನು ರೂಪಿಸುವ ಸರ್ಕಾರವನ್ನು ಆರಿಸಲು ಮತದಾನದ ಮೂಲಕವೇ ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಮತದಾನದ ಸಮಯದಲ್ಲಿ ಜಾತಿ, ಧರ್ಮ , ಹಣ, ಮದ್ಯ ಮತ್ತಿತರ ಆಸೆ-ಆಮಿಷಗಳಿಗೆ ಬಲಿಯಾಗದೆ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎಲ್ಲರೂ ಮುಂದಾಗಿ ಮತದಾನದ ದಿನದಂದು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶ್ರೀಮತಿ ಮಮತಾಗೌಡರ್‌, ಮುಖ್ಯಯೋಜನಾಧಿಕಾರಿ ಮಲ್ಲನಾಯಕ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಶ್ರೀಮತಿ ರೇಣುಕಾದೇವಿ, ರಾಘವೇಂದ್ರ, ಯೋಗೇಂದ್ರ, ಶ್ರೀಮತಿ ರೇಷ್ಮಾಬಾನು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಿಬ್ಬಂಧಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande