

ಬಳ್ಳಾರಿ, 30 ಮಾರ್ಚ್ (ಹಿ.ಸ.)
ಆ್ಯಂಕರ್ : ಸಮಾಜದಲ್ಲಿ ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಪರಸ್ಪರ ಧರ್ಮದ ತಿರುಳುಗಳನ್ನು ಅರ್ಥ ಮಾಡಿಕೊಂಡಾಗ ಸಮಾಜದಲ್ಲಿ ಶಾಂತಿ, ಜನರಲ್ಲಿ ನೆಮ್ಮದಿ ಮತ್ತು ಸೌಹಾರ್ದತೆ ಮೂಡಲು ಸಾಧ್ಯವಿದೆ ಎಂದು ಸೋಮಸಮುದ್ರ ಕೊಟ್ಟೂರು ಸ್ವಾಮಿ ಶಾಖಾ ಮಠದ ಸಿದ್ಧಲಿಂಗಸ್ವಾಮಿಗಳು ತಿಳಿಸಿದ್ದಾರೆ.
ಜಮಾತೆ ಇಸ್ಲಾಮಿ ಹಿಂದ್ನ ಬಳ್ಳಾರಿ ಜಿಲ್ಲಾ ಘಟಕ ಈದ್ ಮಿಲನ್ ಸೌಹಾರ್ದ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಶಾಂತಿ ನೆಲೆಸಬೇಕಾದ ಅಗತ್ಯವಿದೆ. ನೆಮ್ಮದಿಯನ್ನು ಹುಡುಕುವ ಪ್ರತಿಯೊಬ್ಬರೂ ಮಾನವೀಯತೆ ಮತ್ತು ಎಲ್ಲಾ ಧರ್ಮಗಳ ತಿರುಗಳುಗಳನ್ನು ಅರ್ಥ ಮಾಡಿಕೊಂಡು, ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬರಲ್ಲೂ ಸೌಹಾರ್ದತೆ ಮೂಡಲಿದೆ ಎಂದರು.
ಕ್ರ್ರೈಸ್ತ ಧರ್ಮ ಗುರುಗಳಾದ ಐವಾನ್ ಪಿಂಟೋ ಅವರು, ಭಾರತದಲ್ಲಿ ಸಂವಿಧಾನ ಚೌಕಟ್ಟಿನೊಳಗೆ ಎಲ್ಲಾ ಧರ್ಮಗಳನ್ನು ಆಚರಿಸಲು ಅವಕಾಶವಿದೆ. ಬೇರೆಯವರಿಗೆ ತೊಂದರೆ ಆಗದಂತೆ ನಮ್ಮ ನಮ್ಮ ಧರ್ಮಗಳನ್ನು ಆಚರಿಸಲು ಮುಕ್ತ ಅವಕಾಶವಿದೆ ಎಂದರು.
ಸೈಯದ್ ಮಿಸಾಜುದ್ದೀನ್ ಖಾದ್ರಿ ಅವರು ರಂಜಾನ್ ಮಾಸಾಚರಣೆಯ ಮಹತ್ವವನ್ನು ವಿವರಿಸಿ, ತಿಳಿಸಿದರು.
ಅಖಂಡ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ, ಜಮಾತೆ ಇಸ್ಲಾಂ ಹಿಂದ್ನ ಬಳ್ಳಾರಿ ಜಿಲ್ಲಾ ಮುಖ್ಯಸ್ಥರಾದ ಡಾ. ಜೈನುಲ್ ಅಬಿದ್ದೀನ್ ಖಾದ್ರಿ, ನಿಜಾಮುದ್ದೀನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗುಲ್ಪಂ ಅಲಿ ಅವರು ಕುರಾನ್ ಪಠಣ ಮಾಡಿ, ಪ್ರಾರ್ಥನೆ ಸಲ್ಲಿಸಿದರು. ಸೈಯದ್ ನಾಸೀರ್ ಅಲಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಿರಾಜ್ ಅಹಮದ್ ಅವರು ಕಾರ್ಯಕ್ರಮ ನಿರೂಪಿಸಿ - ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್