
ಶಿರಸಿ, 29 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಕೈಗೊಂಡಿರುವ ಬದಲಾವಣೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸಚಿವರ ಅವಿವೇಕದ ಪ್ರಯೋಗ ನಡೆಯಬಾರದು” ಎಂದು ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಧಾರಗಳನ್ನು ತೀವ್ರವಾಗಿ ಟೀಕಿಸಿದ ಅವರು, ದಶಕಗಳಿಂದ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಧಕ್ಕೆ ತಂದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ತೃತೀಯ ಭಾಷೆಯ ಅಂಕಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಗ್ರೇಡ್ ಪದ್ಧತಿಗೆ ಸೀಮಿತಗೊಳಿಸಿರುವುದು ಹಾಗೂ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಿರುವ ಕ್ರಮ ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಸುವಂತಾಗಿದೆ ಎಂದು ಕಾಗೇರಿ ಅಭಿಪ್ರಾಯಪಟ್ಟರು.
“ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್ ಅನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿ ಅಥವಾ ಸಂಸ್ಕೃತವನ್ನು ಸಾಂಸ್ಕೃತಿಕ ದೃಷ್ಟಿಕೋನದಿಂದ ಕಲಿಯುವ ವ್ಯವಸ್ಥೆ ಇತ್ತು. ಈಗ ತೃತೀಯ ಭಾಷೆ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಸ್ಥಿತಿಗೆ ತಲುಪಿದೆ. ಇದರಿಂದ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯ ಕುಂಠಿತವಾಗಲಿದೆ,” ಎಂದು ಅವರು ಎಚ್ಚರಿಸಿದರು.
ಸಾರ್ವಜನಿಕರು ಅಥವಾ ಶಿಕ್ಷಣ ತಜ್ಞರೊಂದಿಗೆ ಯಾವುದೇ ಪೂರ್ವಭಾವಿ ಚರ್ಚೆ ನಡೆಸದೆ ಏಕಾಏಕಿ ಇಂತಹ ಬದಲಾವಣೆಗಳನ್ನು ಜಾರಿಗೊಳಿಸಿರುವುದು ಸಚಿವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
“ಶಿಕ್ಷಣ ಕ್ಷೇತ್ರವು ರಾಜಕೀಯ ಪ್ರಯೋಗಶಾಲೆಯಲ್ಲ. ಈ ನಿರ್ಧಾರದಿಂದ ರಾಜ್ಯದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಿಂದೆ ಬೀಳುವ ಸಾಧ್ಯತೆ ಇದೆ,” ಎಂದು ಆತಂಕ ವ್ಯಕ್ತಪಡಿಸಿದ ಕಾಗೇರಿ, ಸರ್ಕಾರ ತಕ್ಷಣವೇ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದರೊಂದಿಗೆ, ಭಾಷಾ ತಜ್ಞರು ಹಾಗೂ ಸಾಹಿತಿಗಳೊಂದಿಗೆ ಪಾರದರ್ಶಕ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa