
ಬಾಗಲಕೋಟೆ, 28 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮದೇ ಆದ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿವೆ. ಈ ನಡುವೆ ರಾಜ್ಯದ ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಬಾಗಲಕೋಟೆಯಲ್ಲಿ ವಿರೋಧ ವ್ಯಕ್ತವಾಗಿದೆ.
ನಗರದ ಅಂಜುಮನ್ ಸಮಿತಿಯ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಜಮೀರ್ ಅಹ್ಮದ್ ಅವರು ಪ್ರಚಾರಕ್ಕಾಗಿ ಬಾಗಲಕೋಟೆಗೆ ಬರುವುದನ್ನು ವಿರೋಧಿಸಿ ‘ಗೋ ಬ್ಯಾಕ್ ಜಮೀರ್ ಅಹ್ಮದ್’ ಅಭಿಯಾನ ಆರಂಭಿಸಿದ್ದಾರೆ. ಸಚಿವರ ಭೇಟಿಗೆ ವಿರೋಧ ವ್ಯಕ್ತಪಡಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ವಿರೋಧಕ್ಕೆ ಅಂಜುಮನ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಬೆಳವಣಿಗೆಗಳು ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಸಂಸ್ಥೆಯ ಹಿಂದಿನ ಅಧ್ಯಕ್ಷರನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಬದಲಾಯಿಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಅದರ ಅನುಮೋದನೆಗಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಕಳುಹಿಸಲಾಗಿತ್ತು. ಆದರೆ, ವಕ್ಫ್ ಸಚಿವರ ಇಲಾಖೆಯಿಂದ ಈ ಪ್ರಕ್ರಿಯೆಗೆ ಸುಮಾರು ಒಂಬತ್ತು ತಿಂಗಳ ಕಾಲ ವಿಳಂಬವಾಗಿದೆ ಎಂದು ಆರೋಪಿಸಲಾಗಿದೆ.
ಇದರಿಂದ ಬಡ ಸಂಸ್ಥೆಯಾದ ಅಂಜುಮನ್ಗೆ ಅನ್ಯಾಯವಾಗಿದೆ ಎಂದು ಕೆಲ ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು, ಉಪಚುನಾವಣೆಯ ಪ್ರಚಾರದಲ್ಲಿ ಈ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande