
ವಿಜಯಪುರ, 28 ಮಾರ್ಚ್ (ಹಿ.ಸ.)
ಆ್ಯಂಕರ್ : ಮದ್ಯದ ವ್ಯಸನಕ್ಕೆ ಒಳಗಾದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ವಿಜಯಪುರ ಜಿಲ್ಲೆಯ ತಿಕೋಟೆ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.
ಕೋಟ್ಯಾಳ ಗ್ರಾಮದ ನಿವಾಸಿಯಾದ ಶ್ರೀಶೈಲ್ ಎಂಬ ವ್ಯಕ್ತಿ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿ ಕೆಲ ಕಾಲ ಆತಂಕ ಸೃಷ್ಟಿಸಿದನು. ಮದ್ಯ ನೀಡಿದರೆ ಮಾತ್ರ ಕೆಳಗಿಳಿಯುತ್ತೇನೆ ಎಂದು ಹೇಳುತ್ತಾ ಮೇಲೆಯೇ ಕುಳಿತುಕೊಂಡು ಹುಚ್ಚಾಟ ಮೆರೆದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶ್ರೀಶೈಲ್ ಮದ್ಯ ವ್ಯಸನಿಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಇದೇ ರೀತಿ ಎರಡು ಬಾರಿ ಮೊಬೈಲ್ ಟವರ್ ಏರಿ ಆತಂಕ ಉಂಟು ಮಾಡಿದ್ದಾನೆ ಎಂದು ಗ್ರಾಮಸ್ಥರು ಹಿಂದುಸ್ತಾನ್ ಸಮಾಚಾರ ಸುದ್ದಿ ಸಂಸ್ಥೆಗೆ ತಿಳಿಸಿದರು.
ಮದ್ಯಕ್ಕಾಗಿ ಆಗಾಗ ಟವರ್ ಏರಿ ಹುಚ್ಚಾಟ ಮಾಡುತ್ತಿದ್ದಾನೆ ಎಂಬ ಮಾತು ಗ್ರಾಮದಲ್ಲಿ ಕೇಳಿ ಬರುತ್ತಿದೆ.
ಘಟನೆ ಕುರಿತು ಮಾಹಿತಿ ಪಡೆದ ತಿಕೋಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಬಹಳ ಸಮಯ ಸಮಜಾಯಿಷಿ ನೀಡಿ ಕೊನೆಗೆ ಶ್ರೀಶೈಲ್ ಅವರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು. ಘಟನೆ ಕೆಲಕಾಲ ಗ್ರಾಮದಲ್ಲಿ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande