
ಗದಗ, 25 ಮಾರ್ಚ್ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ಹಲವಡೆ ಕಳೆದ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಸುರಿದ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತಾಲೂಕಿನ ದಿಂಡೂರ ತಾಂಡಾದಲ್ಲಿ ಗಾಳಿಯ ತೀವ್ರತೆಗೆ ಮನೆಗಳ ಮೇಲ್ಛಾವಣಿ ತಗಡಿನ ಶೀಟ್ಗಳು ಹಾರಿ ಭಾರೀ ಅವಾಂತರ ಉಂಟಾಗಿದೆ.
ಏಕಾಏಕಿ ಬೀಸಿದ ಬಿರುಗಾಳಿಗೆ ನಾಲ್ಕಕ್ಕೂ ಹೆಚ್ಚು ಮನೆಗಳ ತಗಡಿನ ಶೀಟ್ಗಳು ಹಾರಿ ಹೋಗಿದ್ದು, ಹಾರಿದ ಶೀಟ್ಗಳು ಜನರ ಮೇಲೆ ಬಿದ್ದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಶಿವಪ್ಪ ಲಮಾಣಿ ಅವರ ಕಾಲಿಗೆ ಗಾಯವಾಗಿದ್ದು, ಸೋಮವ್ವ ಲಮಾಣಿ ಅವರಿಗೆ ಕೈಮುರಿತ ಉಂಟಾಗಿದೆ. ದೇವಲಪ್ಪ ಲಮಾಣಿ ಅವರಿಗೆ ತಲೆ ಹಾಗೂ ಬೆನ್ನಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.
ಭಾರಿ ಗಾಳಿ-ಮಳೆಯಿಂದ ತಾಂಡಾದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ನಿವಾಸಿಗಳು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.
ಗಾಳಿಯ ಹೊಡೆತಕ್ಕೆ ಹಲವಾರು ಮರಗಳು ಧರೆಗುರುಳಿದ್ದು, ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ.
ಇದೇ ವೇಳೆ ಘಟನೆ ನಡೆದ ಬಳಿಕ ತಹಶೀಲ್ದಾರ, ರೆವಿನ್ಯೂ ಇನ್ಸ್ಪೆಕ್ಟರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಂಪರ್ಕಕ್ಕೆ ಸಿಗದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ಹಾಗೂ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನೂ ಗಾಳಿ-ಮಳೆ ನಿಲ್ಲದ ಹಿನ್ನೆಲೆಯಲ್ಲಿ ತಾಂಡಾ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಾನಿ ಸಂಭವಿಸಬಹುದೆಂಬ ಭೀತಿ ವ್ಯಕ್ತವಾಗಿದ್ದು, ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP