
ನವದೆಹಲಿ, 24 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸೈನಿಕ ಸಂಘರ್ಷದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಂಗಳವಾರ ದೂರವಾಣಿ ಸಂಭಾಷಣೆ ನಡೆಯಿತು. ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಇಬ್ಬರು ನಾಯಕರು ವಿವರವಾಗಿ ಚರ್ಚಿಸಿದರು.
ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಶ್ಚಿಮ ಏಷ್ಯಾದ ಉದ್ವಿಗ್ನತೆ ಕಡಿಮೆ ಮಾಡುವ ಹಾಗೂ ಶಾಂತಿ ಪುನಃಸ್ಥಾಪನೆಗೆ ಭಾರತ ತನ್ನ ಬೆಂಬಲ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ವಿಶೇಷವಾಗಿ ಹಾರ್ಮುಜ್ ಜಲಸಂಧಿಯ ಮುಕ್ತ, ಸುರಕ್ಷಿತ ಮತ್ತು ಎಲ್ಲರಿಗೂ ಲಭ್ಯವಾಗಿರುವುದು ಜಾಗತಿಕ ಹಿತಾಸಕ್ತಿಗೆ ಅತ್ಯಂತ ಅಗತ್ಯವೆಂದು ಪ್ರಧಾನಿ ಒತ್ತಿ ಹೇಳಿದರು. ಈ ಜಲಸಂಧಿಯ ಮೂಲಕ ಸಾಗುವ ಇಂಧನ ಪೂರೈಕೆ ಜಾಗತಿಕ ಆರ್ಥಿಕತೆಗೆ ಮಹತ್ವದ್ದಾಗಿದೆ.
ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳ ಬಗ್ಗೆ ಪರಸ್ಪರ ಸಂಪರ್ಕದಲ್ಲಿರಲು ಮೋದಿ ಮತ್ತು ಟ್ರಂಪ್ ಒಪ್ಪಿಕೊಂಡಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ಜಾಗತಿಕ ಇಂಧನ ಪೂರೈಕೆಯ ಮೇಲಿನ ಪರಿಣಾಮದ ಆತಂಕದ ನಡುವೆಯೇ ಈ ಮಾತುಕತೆ ನಡೆದಿರುವುದು ಗಮನಾರ್ಹವಾಗಿದೆ.
ಇದಕ್ಕೂ ಮೊದಲು, ನವದೆಹಲಿಯಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಮಾತುಕತೆ ಕುರಿತು ವಿವರ ನೀಡಿದ್ದು, ಹಾರ್ಮುಜ್ ಜಲಸಂಧಿಯ ಸುರಕ್ಷತೆ ಹಾಗೂ ಪ್ರಾದೇಶಿಕ ಸ್ಥಿರತೆ ಕುರಿತು ಉಭಯ ನಾಯಕರು ಗಮನ ಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa