ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ:ಭದ್ರತೆಗೆ ಎಐ ತಂತ್ರಜ್ಞಾನ; ಟಿಕೆಟ್ ಮಾರಾಟಕ್ಕೆ ಚಾಲನೆ
ಬೆಂಗಳೂರು, 24 ಮಾರ್ಚ್ (ಹಿ.ಸ.): ಆ್ಯಂಕರ್: ಐಪಿಎಲ್ 2026 ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಭದ್ರತೆ, ಟಿಕೆಟ್ ವ್ಯವಸ್ಥೆ ಹಾಗೂ ತಂಡದ ಸಿದ್ಧತೆ ಕುರಿತು ವಿವರ ನೀಡಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಉಪಾಧ್ಯಕ್ಷ
Ipl


ಬೆಂಗಳೂರು, 24 ಮಾರ್ಚ್ (ಹಿ.ಸ.):

ಆ್ಯಂಕರ್:

ಐಪಿಎಲ್ 2026 ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಭದ್ರತೆ, ಟಿಕೆಟ್ ವ್ಯವಸ್ಥೆ ಹಾಗೂ ತಂಡದ ಸಿದ್ಧತೆ ಕುರಿತು ವಿವರ ನೀಡಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಉಪಾಧ್ಯಕ್ಷ ರಾಜೇಶ್ ಮೆನನ್, ರಾಜ್ಯ ಸರ್ಕಾರದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಗೆ ವಿಶೇಷ ಒತ್ತು ನೀಡಲಾಗಿದೆ. ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಸಿಸಿಟಿವಿ ಕ್ಯಾಮರಾಗಳ ಜೊತೆಗೆ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಾಗುವ ಸ್ಥಳಗಳನ್ನು ಗುರುತಿಸಿ ತಕ್ಷಣ ಎಚ್ಚರಿಕೆ ನೀಡುವ ವ್ಯವಸ್ಥೆ ರೂಪಿಸಲಾಗಿದೆ. ಎರಡು ಕ್ರೀಡಾಂಗಣದಲ್ಲಿ ಹಾಗೂ ಒಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ಮೂರು ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಟಿಕೆಟ್ ಮಾರಾಟ ಇಂದು ಸಂಜೆಯಿಂದ ಆರಂಭವಾಗಲಿದ್ದು, ಮೆಟ್ರೋ ಸಂಪರ್ಕ ವ್ಯವಸ್ಥೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಟಿಕೆಟ್ ಜೊತೆಗೆ ಪಾರ್ಕಿಂಗ್ ಬುಕ್ಕಿಂಗ್ ವ್ಯವಸ್ಥೆಯೂ ಲಭ್ಯವಿದೆ. ಪಂದ್ಯ ಆರಂಭಕ್ಕೂ ನಾಲ್ಕು ಗಂಟೆಗಳ ಮುಂಚೆಯೇ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಕ್ರೀಡಾಂಗಣದ ಸುತ್ತಮುತ್ತ ಕಾರುಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಅಧಿಕೃತ ತಾಣಗಳ ಮೂಲಕ ಮಾತ್ರ ಟಿಕೆಟ್ ಖರೀದಿಸಲು ಅಭಿಮಾನಿಗಳಿಗೆ ಸೂಚಿಸಲಾಗಿದೆ.

ಕಳೆದ ವರ್ಷದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ, ಆಟಗಾರರು 11 ಸಂಖ್ಯೆಯ ಜೆರ್ಸಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೊತೆಗೆ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಖಾಲಿ ಇಡುವ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದು ತಂಡ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande