ಪಶ್ಚಿಮ ಏಷ್ಯಾ ಬಿಕ್ಕಟ್ಟು: ಸರಕಾ ಆರ್ಥಿಕ ಪರಿಣಾಮ ಸ್ಪಷ್ಟಪಡಿಸಲಿ; ಮನೀಶ್ ತಿವಾರಿ ಆಗ್ರಹ
ನವದೆಹಲಿ, 24 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಮಿಲಿಟರಿ ಸಂಘರ್ಷದ ಪರಿಣಾಮವಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಆಗ್ರಹಿಸಿದ್ದಾರೆ. ಲೋಕಸಭೆಯಲ್ಲಿ ‘ಹಣಕಾಸು ಮಸೂದೆ–2026’ ಮೇಲ
Manish tiwari


ನವದೆಹಲಿ, 24 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಮಿಲಿಟರಿ ಸಂಘರ್ಷದ ಪರಿಣಾಮವಾಗಿ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ‘ಹಣಕಾಸು ಮಸೂದೆ–2026’ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಗಲ್ಫ್ ಪ್ರದೇಶದಲ್ಲಿನ ಯುದ್ಧ ಮತ್ತು ತೈಲ ಬೆಲೆಗಳ ಏರಿಕೆಯಿಂದ ಬಜೆಟ್‌ನ ಮೂಲ ಅಂದಾಜುಗಳು ಈಗ ಅನ್ವಯಿಸದಂತಾಗಿವೆ ಎಂದು ಹೇಳಿದರು. ಮೇ 1 ನಂತರ ದೇಶವು ಹೊಸ ಆರ್ಥಿಕ ವಾಸ್ತವವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತೈಲ, ಎಲ್‌ಎನ್‌ಜಿ, ಆಹಾರ ಧಾನ್ಯಗಳು ಮತ್ತು ಔಷಧಿಗಳ ಬೆಲೆಗಳ ಮೇಲೆ ಈ ಸಂಘರ್ಷವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಫೆಬ್ರವರಿ 2026ರಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $70 ಇದ್ದು, ಮಾರ್ಚ್‌ನಲ್ಲಿ ಅದು $119 ಕ್ಕಿಂತ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

ಭಾರತದ ಆಮದು ಅವಲಂಬನೆ ಕೂಡ ಹೆಚ್ಚುತ್ತಿರುವುದನ್ನು ತಿವಾರಿ ಸೂಚಿಸಿದರು. 2012-13ರಲ್ಲಿ ಕಚ್ಚಾ ತೈಲ ಆಮದು ಶೇ.77 ಇದ್ದು, 2025-26ಕ್ಕೆ ಅದು ಶೇ.88ಕ್ಕೆ ಏರಿದೆ. ಎಲ್‌ಎನ್‌ಜಿ ಆಮದು ಸಹ ಶೇ.30ರಿಂದ ಶೇ.45-47ಕ್ಕೆ ಏರಿಕೆಯಾಗಿದೆ. ತೈಲ ಬೆಲೆಯಲ್ಲಿ ಪ್ರತಿ $10 ಏರಿಕೆಯಿಂದ ಭಾರತದ ಮೇಲೆ $10-15 ಬಿಲಿಯನ್ ಹೆಚ್ಚುವರಿ ಭಾರ ಬೀಳುತ್ತದೆ ಎಂದು ಅವರು ಹೇಳಿದರು.

ಇನ್ನು ದೇಶದ ಸಾಲಭಾರ ಹೆಚ್ಚುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, 2013-14ರಲ್ಲಿ ₹56.51 ಲಕ್ಷ ಕೋಟಿ ಇದ್ದ ಒಟ್ಟು ಸಾಲ 2026ಕ್ಕೆ ₹214.8 ಲಕ್ಷ ಕೋಟಿಗೆ ಏರಿದೆ ಎಂದರು. ಸಾಲ-ಜಿಡಿಪಿ ಅನುಪಾತವು ಶೇ.84.2ಕ್ಕೆ ತಲುಪಿದ್ದು, ಎಫ್‌ಆರ್‌ಬಿಎಂ ನಿಯಮಿತ ಮಿತಿಯನ್ನೂ ಮೀರಿ ಹೋಗಿದೆ ಎಂದು ತಿಳಿಸಿದರು.

ತೆರಿಗೆ ಸಂಗ್ರಹದಲ್ಲಿಯೂ ನಿರೀಕ್ಷಿತ ಮಟ್ಟದ ಬೆಳವಣಿಗೆ ಆಗಿಲ್ಲ ಎಂದು ಅವರು ಟೀಕಿಸಿದರು. ಸರ್ಕಾರ ನಿರೀಕ್ಷಿಸಿದ್ದ ಶೇ.13ರ ಬದಲು ಕೇವಲ ಶೇ.3ರಷ್ಟು ಮಾತ್ರ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಪರೋಕ್ಷ ತೆರಿಗೆಗಳು ಏರಿಕೆಯಾಗಬೇಕಿದ್ದರೆ, ಬದಲಾಗಿ ಶೇ.-1ರಷ್ಟು ಕುಸಿತ ಕಂಡಿವೆ ಎಂದು ಹೇಳಿದರು.

ಖಾಸಗಿ ಹೂಡಿಕೆ ಕುಂಠಿತವಾಗಿರುವುದನ್ನು ಉಲ್ಲೇಖಿಸಿದ ಅವರು, ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡಿದರೂ ಹೂಡಿಕೆ ಹೆಚ್ಚಳವಾಗಿಲ್ಲ. ಇದರಿಂದ ಆರ್ಥಿಕತೆ ಸಾರ್ವಜನಿಕ ಬಂಡವಾಳ ವೆಚ್ಚದ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.

ರೂಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ಹೂಡಿಕೆ ಹೊರಹರಿವುಗಳನ್ನೂ ಉಲ್ಲೇಖಿಸಿದ ಅವರು, 2014ರಲ್ಲಿ ಡಾಲರ್‌ಗೆ ₹60.99 ಇದ್ದ ರೂಪಾಯಿ ಈಗ ₹93.34ಕ್ಕೆ ಕುಸಿದಿದೆ ಎಂದರು. ಇತ್ತೀಚಿನ ತಿಂಗಳುಗಳಲ್ಲಿ ಎಫ್‌ಡಿಐ ಒಳಹರಿವು ಋಣಾತ್ಮಕವಾಗಿರುವುದರಿಂದ ಇದು ರೂಪಾಯಿ ಮೌಲ್ಯಕ್ಕೆ ಮತ್ತಷ್ಟು ಒತ್ತಡ ತಂದಿದೆ ಎಂದು ಹೇಳಿದರು.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಣಾಮವಾಗಿ ಬಜೆಟ್‌ನ ಅಡಿಪಾಯವೇ ಬದಲಾಗಿದೆ ಎಂದು ಹೇಳಿದ ತಿವಾರಿ, ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರವು ಸ್ಪಷ್ಟ ಮತ್ತು ನಿಖರ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande