ಮಾದಕದ್ರವ್ಯ ಮುಕ್ತ ಸಮಾಜಕ್ಕಾಗಿ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ
ಮಾದಕದ್ರವ್ಯ ಮುಕ್ತ ಸಮಾಜಕ್ಕಾಗಿ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆ
ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಮಾದಕದ್ರವ್ಯ ಬಳಕೆ ತಡೆ ಮತ್ತು ನಿಯಂತ್ರಣ ಸಮಿತಿಯ ಸಭೆ ನಡೆಸಿದರು.


ಕೋಲಾರ, ಮಾರ್ಚ್ ೨೪ (ಹಿ.ಸ):

ಆ್ಯಂಕರ್ : ಜಿಲ್ಲೆಯಲ್ಲಿ ಮಾದಕದ್ರವ್ಯಗಳ ವ್ಯಸನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಯುವಜನತೆಯನ್ನು ಈ ವ್ಯಸನದಿಂದ ರಕ್ಷಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಮಾದಕದ್ರವ್ಯ ಬಳಕೆ ತಡೆ ಮತ್ತು ನಿಯಂತ್ರಣ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಡ್ರಗ್ ಪೆಡ್ಲರ್ಗಳನ್ನು ಗುರುತಿಸಿ, ಅವರ ವಿರುದ್ಧ ಕಠಿಣವಾದ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಒಡಿಶಾ ಮತ್ತು ಆಂಧ್ರಪ್ರದೇಶದ ಕಡೆಯಿಂದ ಬರುವ ರೈಲುಗಳಲ್ಲಿ ಮಾದಕವಸ್ತುಗಳ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಸಂಶಯವಿರುವುದರಿAದ, ರೈಲ್ವೆ ಪೊಲೀಸ್ ಮತ್ತು ಡಿ.ಆರ್.ಎಂ ಅವರಿಗೆ ಪತ್ರ ಬರೆದು ತಪಾಸಣೆಯನ್ನು ತೀವ್ರಗೊಳಿಸಲು ತೀರ್ಮಾನಿಸಲಾಯಿತು.

ತನಿಖೆಯ ಪ್ರಕಾರ, ಶೇ. ೫೦ ಕ್ಕಿಂತ ಹೆಚ್ಚು ಮಾದಕವಸ್ತು ಬಳಕೆದಾರರು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಆದ್ದರಿಂದ ಕೈಗಾರಿಕಾ ಪ್ರದೇಶಗಳಲ್ಲಿ ಮತ್ತು ಲೇಬರ್ ಕಾಲೋನಿಗಳಲ್ಲಿ ಜಾಗೃತಿ ಮೂಡಿಸಲು ಕಾರ್ಮಿಕ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.

ವಿದ್ಯಾರ್ಥಿಗಳು ದಾರಿ ತಪ್ಪದಂತೆ ತಡೆಯಲು ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ 'ಮಾದಕದ್ರವ್ಯ ವಿರೋಧಿ ಕೋಶ'ಗಳನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ಶಾಲಾ ಆವರಣದ ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಪುನರ್ವಸತಿ ಕೇಂದ್ರಗಳು ನಿಯಮಾನುಸಾರ ನೋಂದಣಿಯಾಗಿವೆಯೇ ಮತ್ತು ಅಲ್ಲಿನ ಚಟುವಟಿಕೆಗಳು ಸರಿಯಾಗಿವೆಯೇ ಎಂಬ ಬಗ್ಗೆ ಜಂಟಿ ತಪಾಸಣೆ ನಡೆಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಲಾಯಿತು.

ಗಾಂಜಾ ಬೆಳೆಯುವ ಭೂಮಾಲೀಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಅಂತಹ ಜಮೀನುಗಳ ಆರ್.ಟಿ.ಸಿ ರದ್ದುಪಡಿಸಲು ಮತ್ತು ಅವರ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸೂಚಿಸಿದರು. ಜಿಲ್ಲೆಯನ್ನು ಮಾದಕ ವಸ್ತು ಹಾಗೂ ವ್ಯಸನಮುಕ್ತವನ್ನಾಗಿ ಮಾಡಲು ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.

ಸಭೆಯಲ್ಲಿ ಕೋಲಾರ ಪೊಲೀಸ್ ವರಿಷ್ಟಾಧಿಕಾರಿಗಳಾದ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಷು ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್, ಶಾಲಾ ಶಿಕ್ಷಣ ಉಪನಿರ್ದೇಶಕರಾದ ಆಸ್ಮಾ, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande