ಲಿಂಗಾದಾರಿತ ದೌರ್ಜನ್ಯ ತಡೆಗಟ್ಟಲು ಕರೆ
ಲಿಂಗಾದಾರಿತ ದೌರ್ಜನ್ಯ ತಡೆಗಟ್ಟಲು ಕರೆ
ಲಿಂಗಾಧಾರಿತ ದೌರ್ಜನ್ಯ ತಡೆಗಟ್ಟುವ ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಪ್ರವೀಣ್ ಬಾಗೇವಾಡಿ ಉದ್ಘಾಟಿಸಿದರು.


ಕೋಲಾರ ಮಾರ್ಚ್ ೨೪ (ಹಿ.ಸ):

ಆ್ಯಂಕರ್ : ಮಹಿಳೆಯರಿಗೆ ಸರ್ಕಾರ ವಿವಿಧ ಯೋಜನೆಗಳಡಿ ಪ್ರೋತ್ಸಾಹ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುತ್ತಿದೆ. ಸಮಾಜದಲ್ಲಿ ಲಿಂಗ ಸಾಮರಸ್ಯ ಬಹುಮುಖ್ಯ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ``ಲಿಂಗ ಸಾಮರಸ್ಯ (ಲಿಂಗಾಧಾರಿತ ದೌರ್ಜನ್ಯ ತಡೆಗಟ್ಟುವ)’’ ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಈ ಹಿಂದೆ ಪುರುಷ ಪ್ರಧಾನ ಸಮಾಜ ಆಗಿತ್ತು. ಆದರೆ ಇಂದಿನ ದಿನಗಳಲ್ಲಿ ಆ ರೀತಿ ಕಂಡು ಬರುವುದಿಲ್ಲ. ಸ್ವಾತಂತ್ರö್ಯ ಬಂದು ೭೦ ವರ್ಷಗಳ ನಂತರ ಮಹಿಳೆಯರು ವಿದ್ಯಾವಂತರಾಗಿ ವಿವಿಧ ಇಲಾಖೆಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಲಿಂಗ ಸಾಮರಸ್ಯ ಸಮಾಜದಲ್ಲಿ ಕಂಡು ಬರುತ್ತಿದೆ ಎಂದರು.

ಲಿಂಗ ಸಾಮರಸ್ಯ ಸಮಾಜವನ್ನು ನಿರ್ಮಿಸಲು ಕೇರಳದ ಅಮ್ರಿತ ವಿಶ್ವವಿದ್ಯಾ ಪೀಠಂ ಹಾಗೂ ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಲಿಂಗಾಧಾರಿತ ದೌರ್ಜನ್ಯ ತಡೆಗಟ್ಟುವ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ೧೦ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹಳ್ಳಿಗಳಲ್ಲಿನ ಕುಟುಂಬಗಳ ಪರಿವರ್ತನೆಯಾದರೆ ಶಾಂತಿ, ಸಮತೋಲನ, ಪ್ರಗತಿಶೀಲ ಹಾಗೂ ಲಿಂಗ ಸಾಮರಸ್ಯ ಸಮಾಜ ನಿರ್ಮಾಣವಾಗುವುದು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಟೇಶ್.ಆರ್ ಮಾತನಾಡಿ ನಮ್ಮ ದೇಶದ ಸಂವಿಧಾನವು ಆರ್ಟಿಕಲ್ ೧೪ ರಂತೆ ಸಮಾನತೆ ಮತ್ತು ೨೧ ರಂತೆ ಜೀವಿಸುವ ಹಕ್ಕನ್ನು ನೀಡಿರುತ್ತದೆ. ೨೦೦೪ ಡಿಸೆಂಬರ್ ೨೦ ರ ಮುಂಚೆ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಗಳಲ್ಲಿ ಸಮಾನ ಹಕ್ಕು ಇರಲಿಲ್ಲ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ೨೦೦೫ ರಲ್ಲಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಗಳಲ್ಲಿ ಗಂಡು ಮಕ್ಕಳಂತೆ ಸಮಾನ ಪಾಲು ಪಡೆಯುವುದು ಎಂದು ತೀರ್ಪು ನೀಡಿದೆ ಎಂದರು.

ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಮಹಿಳೆಯರು ವಿದ್ಯಾಭ್ಯಾಸ ಮಾಡಿ ಆರ್ಥಿಕವಾಗಿ ಸಬಲರಾಗಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಬೆಳವಣಿಗೆ ಲಿಂಗ ಸಾಮರಸ್ಯ ಸಮಾಜ ನಿರ್ಮಾಣಗೊಳ್ಳಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ.ಎನ್, ಜಿಲ್ಲಾ ನಿರೂಪಣಾಧಿಕಾರಿ ನಾಗರತ್ನ.ವಿ, ಸಿಡಿಪಿಓ ಮುನಿರಾಜಪ್ಪ ಬಿ.ಎಂ, ಬೆಂಗಳೂರಿನ ಅಮ್ರಿತಾ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಬ್ರಹ್ಮಚರ್ಯ ನಿಷ್ಕಮಾಮ್ರಿತಾ ಚೈತನ್ಯ, ಕೇರಳದ ಅಮ್ರಿತ ವಿಶ್ವ ವಿದ್ಯಾಪೀಠಂನ ಯೋಜನಾ ವ್ಯವಸ್ಥಾಪಕಿ ಡಾ. ದ್ರಿಷ್ಠಿ ಮಾರವಹ, ಮಾಸ್ಟರ್ ಟ್ರೇನರ್ ಸತೀಶ್ ಮೇತ್ರಿ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande