
ಆಗ್ರಾ, 20 ಮಾರ್ಚ್ (ಹಿ.ಸ.):
ಆ್ಯಂಕರ್:
ಕೇಲಾದೇವಿ ದೇವಸ್ಥಾನ ದರ್ಶನ ಮಾಡಿಕೊಂಡು ಮರಳುತ್ತಿದ್ದ ಭಕ್ತರ ವಾಹನವು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಮಧ್ಯರಾತ್ರಿ ಚಿತ್ರಹಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈ ಗ್ರಾಮ ಸಮೀಪ ಈ ದುರ್ಘಟನೆ ನಡೆದಿದೆ. ಇಟಾವಾ ಜಿಲ್ಲೆಯ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ (ಯುಪಿ 79 ಎಕ್ಸ್ 1851) ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ವಾಹನದಲ್ಲಿ ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಜೈತಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದರು. ವೈದ್ಯರು ಐವರನ್ನು ಮೃತರೆಂದು ಘೋಷಿಸಿದ್ದು, ನಾಲ್ವರನ್ನು ಗಂಭೀರ ಸ್ಥಿತಿಯಲ್ಲಿ ಇಟಾವಾದ ಸೈಫೈ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ.
ಮೃತಪಟ್ಟವರನ್ನು ಒಂದೇ ಕುಟುಂಬದ ಇಟಾವಾ ಜಿಲ್ಲೆಯ ಆರಾಧ್ಯ (8), ದೇವೇಂದ್ರ (35), ಅವರ ಪತ್ನಿ ಸೀಮಾ (32), ಕಾಮತಾ (60) ಹಾಗೂ ಪ್ರತಾಪಪುರದ ಋಷಿ (30) ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಋಷಭ್, ರಶ್ಮಿ, ಆದಿತ್ಯ ಹಾಗೂ ಅವನೀಶ್ ಇದ್ದಾರೆ. ಎಲ್ಲರಿಗೂ ಸೈಫೈ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನಿಗೆ ನಿದ್ದೆ ಮಂಪರು ಬಂದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa