
ಮುಂಬಯಿ, 20 ಮಾರ್ಚ್ (ಹಿ.ಸ.)
ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಅವರ ತಾಯಿ ಸುಧರ್ಷನ್ ಮಲ್ಹೋತ್ರಾ (94) ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.
ವೃದ್ಧಾಪ್ಯ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ತಾಯಿಯ ನಿಧನವು ಮನೀಷ್ ಮಲ್ಹೋತ್ರಾ ಅವರಿಗೆ ಭಾರೀ ಆಘಾತ ಉಂಟುಮಾಡಿದ್ದು, ಅವರು ತಾಯಿಯನ್ನು ತಮ್ಮ ಜೀವನದ ಮಹತ್ತರ ಪ್ರೇರಣೆ ಎಂದು ಪರಿಗಣಿಸುತ್ತಿದ್ದರು.
ಈ ದುಃಖದ ಸುದ್ದಿ ತಿಳಿದ ತಕ್ಷಣವೇ ಬಾಲಿವುಡ್‌ನ ಹಲವು ಖ್ಯಾತ ನಟರು ಮತ್ತು ಗಣ್ಯರು ಮುಂಬೈನಲ್ಲಿರುವ ಮನೀಷ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದಂಪತಿ ಕುಟುಂಬದೊಂದಿಗೆ ನಿಂತು ಧೈರ್ಯ ತುಂಬಿದರು.
ಅಂತಿಮ ದರ್ಶನಕ್ಕಾಗಿ ಆಗಮಿಸಿದವರಲ್ಲಿ ಕರಿಷ್ಮಾ ಕಪೂರ್, ಉರ್ಮಿಳಾ ಮಾತೊಂಡ್ಕರ್, ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಸೇರಿದಂತೆ ಹಲವರು ಸೇರಿದ್ದರು. ಮನೀಷ್ ಅವರ ಆತ್ಮೀಯ ಸ್ನೇಹಿತ ಕರಣ್ ಜೋಹರ್ ಕೂಡ ಈ ದುಃಖದ ಸಂದರ್ಭದಲ್ಲಿ ಜೊತೆಯಾಗಿ ಕಾಣಿಸಿಕೊಂಡರು.
ಇದಲ್ಲದೆ ಅನನ್ಯ ಪಾಂಡೆ, ಸೋನಾಲಿ ಬೆಂದ್ರೆ, ಸಂಜಯ ಕಪೂರ್, ಶನಾಯಾ ಕಪೂರ್ ಮತ್ತು ರವೀನಾ ಟಂಡನ್ ಸೇರಿದಂತೆ ಹಲವರು ಮನೀಷ್ ನಿವಾಸಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಕುಟುಂಬದ ಪ್ರಕಟಣೆಯ ಪ್ರಕಾರ, ಸುಧರ್ಷನ್ ಮಲ್ಹೋತ್ರಾ ಅವರ ಅಂತ್ಯಕ್ರಿಯೆ ಇಂದು (ಮಾರ್ಚ್ 20) ಮುಂಬೈನ ಸಾಂತಾಕ್ರೂಜ್ (ಪಶ್ಚಿಮ) ಭಾಗದಲ್ಲಿರುವ ಹಿಂದೂ ಶ್ಮಶಾನಘಾಟದಲ್ಲಿ ನಡೆಯಲಿದೆ.
ತಾಯಿಯ ಅಗಲಿಕೆಯಿಂದ ಮನೀಷ್ ಮಲ್ಹೋತ್ರಾ ಅವರ ಜೀವನದಲ್ಲಿ ದೊಡ್ಡ ಶೂನ್ಯ ಉಂಟಾಗಿದ್ದು, ಚಿತ್ರರಂಗದ ಅನೇಕ ಗಣ್ಯರು ಅವರ ಕುಟುಂಬದೊಂದಿಗೆ ದುಃಖವನ್ನು ಹಂಚಿಕೊಂಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa