
ಗದಗ, 19 ಮಾರ್ಚ್ (ಹಿ.ಸ.)
ಆ್ಯಂಕರ್:- ಯುಗಾದಿ ಹಬ್ಬದ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಯ ಪರಿಣಾಮ ಹೂವಿನ ಬೆಳೆ ಹಾಗೂ ಮಾರುಕಟ್ಟೆಗೆ ಭಾರೀ ಹೊಡೆತ ಬಿದ್ದಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಹೂ ಕಟಾವು ಕಾರ್ಯವೇ ಸ್ಥಗಿತಗೊಂಡಿದ್ದು, ಹೂ ಮಾರುಕಟ್ಟೆಯಲ್ಲಿ ಹೂಗಳ ಕೊರತೆ ಸ್ಪಷ್ಟವಾಗಿ ಕಂಡುಬಂದಿದೆ.
ಗದಗ ನಗರದ ಎಪಿಎಂಸಿ ಆವರಣದಲ್ಲಿರುವ ಹೂವಿನ ಮಾರುಕಟ್ಟೆ ಸಾಮಾನ್ಯವಾಗಿ ಯುಗಾದಿ ಹಬ್ಬದ ವೇಳೆಗೆ ಕಿಕ್ಕಿರಿದು ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಮಾರುಕಟ್ಟೆ ಬಹುತೇಕ ಖಾಲಿ ಖಾಲಿಯಾಗಿ ಕಾಣಿಸಿಕೊಂಡಿದ್ದು, ವ್ಯಾಪಾರಿಗಳು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಲಕ್ಕುಂಡಿ, ಕದಂಪೂರ, ಪಾಪನಾಶಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೂ ಬೆಳೆದು ಜೀವನ ನಡೆಸುತ್ತಿರುವ ರೈತರು ಮಳೆಯಿಂದಾಗಿ ತೀವ್ರ ಹಾನಿ ಅನುಭವಿಸಿದ್ದಾರೆ. ಮಳೆ ಕಾರಣದಿಂದ ಹೂಗಳು ತೇವದಿಂದ ಕುಳಿತಿದ್ದು, ಗುಣಮಟ್ಟ (ಕ್ವಾಲಿಟಿ) ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಹೂಗಳಿಗೆ ನಿರೀಕ್ಷಿತ ಬೆಲೆ ಸಿಗದೆ ದರ ಕುಸಿತ ಉಂಟಾಗಿದೆ.
ಸಾಮಾನ್ಯವಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಒಂದು ಕೆಜಿ ಸೇವಂತಿಗೆ ಹೂವು 250 ರಿಂದ 300 ರೂಪಾಯಿ ವರೆಗೆ ಮಾರಾಟವಾಗುತ್ತದೆ. ಆದರೆ ಈ ಬಾರಿ ಮಳೆಯಿಂದಾಗಿ ಬೆಲೆ 100 ರಿಂದ 120 ರೂಪಾಯಿಗೆ ಕುಸಿದಿರುವುದು ರೈತರಿಗೆ ಮತ್ತಷ್ಟು ಆಘಾತ ತಂದಿದೆ.
ಇನ್ನು ಗದಗ ಹೂವಿನ ಮಾರುಕಟ್ಟೆಯಿಂದ ಗೋವಾ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೂಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಆದರೆ ಮಳೆಯಿಂದಾಗಿ ಹೂಗಳ ಪ್ರಮಾಣ ಕಡಿಮೆಯಾಗಿರುವುದರಿಂದ ಹೊರರಾಜ್ಯಗಳಿಗೆ ಸಾಗಣೆ ಕೂಡ ಕುಂಠಿತವಾಗಿದೆ.
ಹೂ ವ್ಯಾಪಾರಸ್ಥರಾದ ಬಾಷಾಸಾಬ್ ಮಾತನಾಡಿ, “ಮಳೆಯಿಂದ ಸಮರ್ಪಕವಾಗಿ ಹೂಗಳು ಮಾರುಕಟ್ಟೆಗೆ ಬಂದಿಲ್ಲ. ರೈತರು ಕಟಾವು ಮಾಡಲಾಗದೇ ಹೂ ತೋಟದಲ್ಲೇ ಹಾನಿಯಾಗುತ್ತಿದೆ. ಹೀಗಾಗಿ ಬೇಡಿಕೆ ಇದ್ದರೂ ಸರಬರಾಜು ಕಡಿಮೆಯಾಗಿ, ಬೆಲೆ ಸಹ ಕುಸಿತವಾಗಿದೆ. ಹೊರರಾಜ್ಯಗಳಿಗೆ ಕಳಿಸುವುದಕ್ಕೂ ಸಮಸ್ಯೆ ಎದುರಾಗಿದೆ” ಎಂದು ತಿಳಿಸಿದ್ದಾರೆ.
ಯುಗಾದಿ ಹಬ್ಬದ ಸಂಭ್ರಮದ ನಡುವೆ ಅಕಾಲಿಕ ಮಳೆ ಹೂ ಬೆಳೆಗಾರರ ಮುಖದಲ್ಲಿ ಮಂಕು ಮೂಡಿಸಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP