
ಗದಗ, 19 ಮಾರ್ಚ್ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆ ಹಾಗೂ ಗಾಳಿಯ ಪರಿಣಾಮವಾಗಿ ತೋಟಗಾರಿಕೆ ಬೆಳೆಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ರೈತ ದಂಪತಿಗಳ ಬಾಳೆ ಹಾಗೂ ಪಪ್ಪಾಯಿ ತೋಟ ಸಂಪೂರ್ಣ ಸರ್ವನಾಶವಾಗಿದೆ.
ಗ್ರಾಮದ ಮಂಜುಳಾ ಹಾಗೂ ವೆಂಕಟೇಶ ಹೊಸಮನಿ ದಂಪತಿಗಳು ಸಾಲ ಸೂಲ ಮಾಡಿ, ಚಿನ್ನವನ್ನು ಅಡವಿಟ್ಟು ನಾಲ್ಕು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದರು. ಈ ಪೈಕಿ ಎರಡು ಎಕರೆಯಲ್ಲಿ ಬಾಳೆ ಹಾಗೂ ಇನ್ನೆರಡು ಎಕರೆಯಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದರು.
ವಿಶೇಷವಾಗಿ, ಗ್ರಾಮದಲ್ಲಿ ಮೊದಲ ಬಾರಿಗೆ ಏಲಕ್ಕಿ ಜಾತಿಯ ಬಾಳೆ ಬೆಳೆಯನ್ನು ಪ್ರಯೋಗಾತ್ಮಕವಾಗಿ ಬೆಳೆದಿದ್ದರು. ಸಾವಯುವ ಕೃಷಿ ವಿಧಾನವನ್ನು ಅನುಸರಿಸಿದ್ದ ದಂಪತಿಗಳು, ನಾಲ್ಕು ಎಕರೆ ತೋಟಕ್ಕೆ ಸುಮಾರು 7ರಿಂದ 8 ಲಕ್ಷ ರೂ.ವರೆಗೆ ವೆಚ್ಚ ಮಾಡಿದ್ದರು. ಉತ್ತಮವಾಗಿ ಬೆಳೆದಿದ್ದ ಬಾಳೆ ತೋಟ ಇನ್ನೂ ನಾಲ್ಕು ತಿಂಗಳಲ್ಲಿ ಕಟಾವಿಗೆ ಬರಬೇಕಾಗಿತ್ತು. ಆದರೆ ಅಕಾಲಿಕವಾಗಿ ಸುರಿದ ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ ಎರಡು ಎಕರೆ ಬಾಳೆ ಗಿಡಗಳು ನೆಲಕಚ್ಚಿ ಸಂಪೂರ್ಣ ಹಾನಿಗೊಳಗಾಗಿವೆ. ಪಪ್ಪಾಯಿ ಬೆಳೆ ಕೂಡಾ ಗಾಳಿಗೆ ನಾಶವಾಗಿದೆ.
ಇದರಿಂದಾಗಿ ರೈತ ದಂಪತಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಮಾಡಿದ ಹೂಡಿಕೆ ಕೈ ತಪ್ಪಿದ ಹಿನ್ನೆಲೆಯಲ್ಲಿ ದಿಕ್ಕು ತೋಚದ ಪರಿಸ್ಥಿತಿ ಎದುರಾಗಿದೆ. “ಮಾಂಗಲ್ಯ ಸರ ಸೇರಿದಂತೆ ಮನೆಯ ಚಿನ್ನವನ್ನು ಅಡವಿಟ್ಟು ಕೃಷಿ ಮಾಡಿದ್ದೇವೆ. ಈಗ ಬೆಳೆ ಹಾಳಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ” ಎಂದು ರೈತ ಮಹಿಳೆ ಮಂಜುಳಾ ನೋವು ವ್ಯಕ್ತಪಡಿಸಿದ್ದಾರೆ.
ಇನ್ನು ರೈತ ವೆಂಕಟೇಶ ಹೊಸಮನಿ ಮಾತನಾಡಿ, “ಈ ವರ್ಷ ಮೊದಲ ಬಾರಿಗೆ ಬಾಳೆ ಬೆಳೆ ಬೆಳೆದಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು. ಆದರೆ ಮಳೆ ಹಾಗೂ ಗಾಳಿಯಿಂದ ಸಂಪೂರ್ಣ ನಷ್ಟವಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ದೊರಕಬೇಕು” ಎಂದು ಮನವಿ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈತರಿಂದ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳು ನಾಶವಾಗಿರುವುದು ರೈತರ ಆರ್ಥಿಕ ಸ್ಥಿತಿಗೆ ಭಾರೀ ಹೊಡೆತ ನೀಡಿದೆ. ಸರ್ಕಾರ ತಕ್ಷಣ ಸ್ಪಂದಿಸಿ ನಷ್ಟಪೂರಕ ಪರಿಹಾರ ಘೋಷಿಸಬೇಕೆಂದು ರೈತ ಕುಟುಂಬ ಆಗ್ರಹಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP