ಕಾಕೋರಿ ಕ್ರಾಂತಿ ಗಾಥಾ: ರಂಗಭೂಮಿಯಲ್ಲಿ ಜೀವಂತವಾದ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ
ನವದೆಹಲಿ, 17 ಮಾರ್ಚ್ (ಹಿ.ಸ.): ಆ್ಯಂಕರ್: ಕಾಕೋರಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ‘ಕಾಕೋರಿ ಕ್ರಾಂತಿ ಗಾಥಾ’ ಎಂಬ ಐತಿಹಾಸಿಕ ನಾಟಕವನ್ನು ಭವ್ಯವಾಗಿ ಪ್ರದರ್ಶಿಸಲಾಯಿತು. ಸಾಹಿತ್ಯ ಕಲಾ ಪರಿಷತ್ (ದೆಹಲಿ ಸರ್ಕಾರ) ಮತ್ತು ನಾಗರಿಕತಾ ಅಧ್ಯಯನ ಕೇಂದ್ರದ ಸಂಯುಕ್
Kakori gatha


ನವದೆಹಲಿ, 17 ಮಾರ್ಚ್ (ಹಿ.ಸ.):

ಆ್ಯಂಕರ್:

ಕಾಕೋರಿ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ‘ಕಾಕೋರಿ ಕ್ರಾಂತಿ ಗಾಥಾ’ ಎಂಬ ಐತಿಹಾಸಿಕ ನಾಟಕವನ್ನು ಭವ್ಯವಾಗಿ ಪ್ರದರ್ಶಿಸಲಾಯಿತು. ಸಾಹಿತ್ಯ ಕಲಾ ಪರಿಷತ್ (ದೆಹಲಿ ಸರ್ಕಾರ) ಮತ್ತು ನಾಗರಿಕತಾ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವು ಸ್ವಾತಂತ್ರ್ಯ ಹೋರಾಟದ ಅಪರೂಪದ ಅಧ್ಯಾಯಗಳನ್ನು ಪ್ರೇಕ್ಷಕರ ಮುಂದಿಟ್ಟಿತು.

ಸಿಲ್ಲಿ ಸೋಲ್ಸ್ ಫೌಂಡೇಶನ್ ನಿರ್ಮಿಸಿರುವ ಈ ನಾಟಕವನ್ನು ರವಿಶಂಕರ್ ರಚಿಸಿದ್ದು, ಪ್ರಿಯಾಂಕಾ ಶರ್ಮಾ ನಿರ್ದೇಶಿಸಿದ್ದಾರೆ. ನಾಟಕವು ಕಾಕೋರಿ ಘಟನೆಯನ್ನು ಕೇವಲ ‘ರೈಲು ದರೋಡೆ’ಯಾಗಿ ಕಾಣದೆ, ಬ್ರಿಟಿಷರ ವಿರುದ್ಧದ ಸಂಘಟಿತ ಕ್ರಾಂತಿಕಾರಿ ಹೋರಾಟವಾಗಿ ಚಿತ್ರಿಸುವ ಮೂಲಕ ವಿಶೇಷ ಗಮನಸೆಳೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ ಡಾ. ಸತ್ಯಪಾಲ್ ಸಿಂಗ್ ಅವರು, ಕಾಕೋರಿ ಘಟನೆ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಅಲುಗಾಡಿಸಿದ ಮಹತ್ವದ ಕ್ರಾಂತಿಕಾರಿ ಕ್ರಮ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ನಾಟಕದ ಲೇಖಕ ರವಿಶಂಕರ್ ಅವರು, ಇತಿಹಾಸದಲ್ಲಿ ಈ ಘಟನೆಯನ್ನು ಸರಳೀಕರಿಸಿ ಚಿತ್ರಿಸಲಾಗಿದೆ ಎಂಬುದನ್ನು ಉಲ್ಲೇಖಿಸಿ, ಅದರ ನಿಜಸ್ವರೂಪವನ್ನು ಜನತೆಗೆ ತಲುಪಿಸುವುದು ತಮ್ಮ ಉದ್ದೇಶ ಎಂದು ಹೇಳಿದರು.

1925ರ ಆಗಸ್ಟ್ 9ರಂದು ನಡೆದ ಕಾಕೋರಿ ಘಟನೆಯಲ್ಲಿ ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ರಾಜೇಂದ್ರನಾಥ್ ಲಾಹಿರಿ, ಠಾಕೂರ್ ರೋಷನ್ ಸಿಂಗ್, ಚಂದ್ರಶೇಖರ್ ಆಜಾದ್ ಹಾಗೂ ಮನ್ಮಥನಾಥ್ ಗುಪ್ತಾ ಸೇರಿದಂತೆ ಹಲವು ಕ್ರಾಂತಿಕಾರಿಗಳು ಭಾಗವಹಿಸಿದ್ದರು. ನಾಟಕದಲ್ಲಿ ಈ ವೀರರ ಸಾಹಸ, ತ್ಯಾಗ ಮತ್ತು ದೇಶಭಕ್ತಿಯನ್ನು ಪ್ರಭಾವಶೀಲ ಸಂಭಾಷಣೆಗಳು ಹಾಗೂ ಕ್ರಾಂತಿಕಾರಿ ಗೀತೆಗಳ ಮೂಲಕ ಜೀವಂತವಾಗಿ ಮೂಡಿಸಲಾಗಿದೆ.

ಇದೇ ವೇಳೆ, ತಿಲ್ಕಾ ಮಾಂಝಿ, ರಾಮಜಿ ಗೊಂಡ್ ಹಾಗೂ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಕೊಡುಗೆಗಳನ್ನು ಕೂಡ ನಾಟಕದಲ್ಲಿ ಒಳಗೊಂಡಿರುವುದು ವಿಶೇಷವಾಗಿದ್ದು, ಭಾರತೀಯ ಪ್ರತಿರೋಧದ ಸಮಗ್ರ ಚಿತ್ರಣವನ್ನು ನೀಡಿತು.

ನಿರ್ದೇಶಕಿ ಪ್ರಿಯಾಂಕಾ ಶರ್ಮಾ ಅವರು, ಈ ನಾಟಕವನ್ನು ಯುವಜನತೆಗೆ ಪ್ರೇರಣೆ ನೀಡುವ ಭಾವನಾತ್ಮಕ ಹಾಗೂ ಚಿಂತನಾ ಯಾತ್ರೆಯಾಗಿ ರೂಪಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು. ನಾಗರಿಕತಾ ಅಧ್ಯಯನ ಕೇಂದ್ರದ ಉಪಾಧ್ಯಕ್ಷ ಪ್ರಕಾಶ್ ಶರ್ಮಾ ಅವರು, ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಬುದ್ಧಿಜೀವಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಟಕವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande